Cauvery water to Tamil Nadu | Karnataka Cabinet decision to release 3500 cusecs water daily to Tamil Nadu
ಬೆಂಗಳೂರು:
5 ಸಾವಿರ ಕ್ಯೂಸೆಕ್ ನಂತೆ ತಮಿಳುನಾಡಿಗೆ ನಿತ್ಯ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದು, ಇದರ ನಡುವೆ ರಾಜ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಬಿಡುಗಡೆ ಮಾಡುತ್ತಿರುವ ಮಾದರಿಯಲ್ಲೇ ಸೆ.26ರವರೆಗೆ ನಿತ್ಯ 3,500 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಕಾವೇರಿ ನದಿ ನೀರು ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಆಗಿರುವ ವಿಚಾರಣೆಯನ್ನು ಎಎಜಿ ಸಂಪುಟ ಸಭೆಯಲ್ಲಿ ವಿವರಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲಾಗುವುದು. ಸೆ.26ರವರೆಗೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುವುದು. 8000 ಕ್ಯುಸೆಕ್ಸ್ ಒಳಹರಿವು ಇದೆ. ಈಗಾಗಲೇ 3,000-3,500 ಕ್ಯುಸೆಕ್ಸ್ ನೀರು ಹರಿದು ಹೋಗುತ್ತಿದೆ. ಸೆ.26 ತನಕ ನೀರು ಬಿಡಲಾಗುತ್ತದೆ. ನಾವು ರೈತರ ಹಿತರಕ್ಷಣೆಯನ್ನೂ ಮಾಡುತ್ತೇವೆ. ಕುಡಿಯುವ ನೀರಿನ ರಕ್ಷಣೆಯನ್ನು ಮಾಡುತ್ತೇವೆ ಎಂದು ಹೇಳಿದರು.
ಮೇಕೆದಾಟು ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಆಕ್ಷೇಪ ಸಲ್ಲಿಸಿದೆ. ಆದರೆ, ಗುರುವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೌಖಿಕವಾಗಿ ಮೇಕೆದಾಟಿಗೆ ಏಕೆ ಅಡ್ಡ ಬರುತ್ತೀರ. ಕರ್ನಾಟಕ ಅವರ ಭೂಮಿಯಲ್ಲಿ ಯೋಜನೆಯನ್ನು ಮಾಡುತ್ತಿದೆ ಎಂದು ತಮಿಳುನಾಡಿಗೆ ತಾಕೀತು ಮಾಡಿದ್ದಾರೆ.
ಹೀಗಾಗಿ ಮೇಕೆದಾಟು ಯೋಜನೆ ಮುಂದುವರಿಸಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಪಡೆಯುವುದು ಸೇರಿ ಬೇಕಾದ ಇತರೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
