ಜೈಪುರ/ಬೆಂಗಳೂರು:
“ರಾಜ್ಯ ಬರಗಾಲಕ್ಕೆ ಸಿಲುಕಿದ್ದು, ಕಾವೇರಿ ಅಣೆಕಟ್ಟುಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆ ಅಸಾಧ್ಯವಾಗಿದ್ದು, ತನ್ನ ಆದೇಶ ಪುನರ್ ಪರಿಶೀಲಿಸಲು ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಬರೆದಿರುವ ಪತ್ರವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಗುರುವಾರ ಸಲ್ಲಿಸಿದರು.
ಜೈಪುರದಲ್ಲಿ ನಡೆದ ಆಣೆಕಟ್ಟುಗಳ ಸುರಕ್ಷತೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಅಲ್ಲಿಗೆ ಆಗಮಿಸಿದ್ದ ಕೇಂದ್ರ ಸಚಿವ ಶೇಖಾವತ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಈ ಮನವಿಪತ್ರ ಸಲ್ಲಿಸಿದರು.
ಈ ಪತ್ರದ ಸಾರಾಂಶ ಹೀಗಿದೆ:
“ನೈರುತ್ಯ ಮುಂಗಾರು ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ತಾಲೂಕುಗಳು ಬರ ಪೀಡಿತವಾಗಿವೆ. ಈ ಪರಿಸ್ಥಿತಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಪಾಲನೆ ಅಸಾಧ್ಯ.
- ಈ ವರ್ಷ ಜೂನ್ 1 ರಿಂದ ಸೆ. 11 ರವರೆಗೂ ಕಾವೇರಿ ಕೊಳ್ಳದ ಆಣೆಕಟ್ಟುಗಳ ಒಟ್ಟಾರೆ ಒಳ ಹರಿವು ಕೇವಲ 104.273 ಟಿಎಂಸಿ ಮಾತ್ರ. ಕಳೆದ 30 ವರ್ಷಗಳಲ್ಲಿ ಈ ಸರಾಸರಿ 228.793 ಟಿಎಂಸಿ ಇತ್ತು.
- ರಾಜ್ಯದಲ್ಲಿ ಪ್ರಸಕ್ತ ವರ್ಷ 58.93% ರಷ್ಟು ಮಳೆ ಕೊರತೆ ಎದುರಾಗಿದೆ.
- ಆಗಸ್ಟ್ 24ರಂದು ರಾಜ್ಯದಲ್ಲಿ ಮಳೆ ಕೊರತೆ ಪ್ರಮಾಣ 53.32% ನಷ್ಟಿತ್ತು, ಕೇವಲ 17 ದಿನಗಳ ಅಂತರದಲ್ಲಿ ಅಂದರೆ ಸೆ.10ರ ವೇಳೆಗೆ ಮಳೆ ಕೊರತೆ ಪ್ರಮಾಣ 58.93%ಗೆ ಏರಿಕೆಯಾಗಿದೆ.
- ರಾಜ್ಯದಲ್ಲಿ ಹಾಲಿ ಬೆಳೆಗಳಿಗೆ 70.20 ಟಿಎಂಸಿ, ಕುಡಿಯುವ ನೀರಿಗೆ 33.00 ಟಿಎಂಸಿ, ಕೈಗಾರಿಕಾ ಉದ್ದೇಶಕ್ಕಾಗಿ 3.00 ಟಿಎಂಸಿ ಸೇರಿದಂತೆ ಒಟ್ಟು 106.20 ಟಿಎಂಸಿ ನೀರು ಕರ್ನಾಟಕ ರಾಜ್ಯಕ್ಕೆ ಬೇಕಿದೆ.
- ಈ 106.20 ಟಿಎಂಸಿ ಪೈಕಿ ಕರ್ನಾಟಕ 53 ಟಿಎಂಸಿ ನೀರು ಕೊರತೆ ಎದುರಿಸುತ್ತಿದೆ.
- ಈ ಮಧ್ಯೆ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ 2 ವಾರಗಳಲ್ಲಿ ಮಳೆ ಸಾಧ್ಯತೆ ಕಡಿಮೆ ಇದೆ.
- ಇದಕ್ಕೆ ವ್ಯತಿರಿಕ್ತವಾಗಿ ತಮಿಳುನಾಡು ಕಳೆದ 92 ದಿನಗಳಲ್ಲಿ 99.776 ಟಿಎಂಸಿ ನೀರು ಬಳಕೆ ಮಾಡಿಕೊಂಡಿದೆ.
- ತಮಿಳುನಾಡು ಆ.23ರ ವೇಳೆಗೆ ಕೇವಲ 5.60 ಲಕ್ಷ ಎಕರೆ ಮಾತ್ರ ನೀರಾವರಿ ಎಂದು ಸುಳ್ಳು ಮಾಹಿತಿ ನೀಡಿದೆ.
- ಈಶಾನ್ಯ ಮುಂಗಾರಿನಿಂದ ಕರ್ನಾಟಕ ರಾಜ್ಯಕ್ಕೆ ಯಾವುದೇ ಪ್ರಯೋಜನ ಇಲ್ಲ. ಹವಾಮಾನ ಇಲಾಖೆ ಈಶಾನ್ಯ ಮುಂಗಾರು ಸಹಜವಾಗಿ ಬೀಳಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
- ಹೀಗಾಗಿ ಕೆಆರ್ ಎಸ್ ಮತ್ತು ಕಬಿನಿ ಆಣೆಕಟ್ಟು ನಂತರದ ಭಾಗಗಳಿಂದ ಬಿಳಿಗುಂಡ್ಲು ಹಾಗೂ ಮೆಟ್ಟೂರು ಆಣೆಕಟ್ಟುವರೆಗೆ ಅನಿಯಂತ್ರಿತವಾಗಿ 60 ಟಿಎಂಸಿ ನೀರು ಹರಿಯಲಿದೆ.
- ಮೆಟ್ಟೂರು ಜಲಾಶಯದಲ್ಲಿ ಪ್ರಸ್ತುತ 24.23 ಟಿಎಂಸಿ ನೀರಿದೆ. ಇದಕ್ಕೆ ಹೆಚ್ಚುವರಿಯಾಗಿ ಹರಿಯುವ 60 ಟಿಎಂಸಿ ನೀರನ್ನು ಪರಿಗಣಿಸಿದರೆ, ಈ ಹಿಂದೆ ಎದುರಾಗಿದ್ದ 1987-88, 2002-03, 2003 04, 2012-13, 2016-17, 2017-18 ಸಂಕಷ್ಟ ವರ್ಷಗಳ ಪರಿಸ್ಥಿತಿಯನ್ನು ಈ ವರ್ಷ ನಿಭಾಯಿಸಬಹುದು.
- ಈ ಸಂಕಷ್ಟದ ವರ್ಷಗಳಲ್ಲಿ ತಮಿಳುನಾಡು ಬಳಸಿದ್ದ ಒಟ್ಟಾರೆ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು (100 ಟಿಎಂಸಿ)ಈ ವರ್ಷ ಜೂ.12ರಿಂದ ಸೆ.11ರ ಒಳಗೆ ಅಂದರೆ 92 ದಿನಗಳ ಅವಧಿಯಲ್ಲಿ ಬಳಸಿದೆ.
- ತಮಿಳುನಾಡು ಈ ಹಿಂದಿನ ವರ್ಷಗಳಿಗಿಂತ ಈ ವರ್ಷ ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆಗೆ ಅವಕಾಶ ನೀಡಿದೆ.
ಕರ್ನಾಟಕ ರಾಜ್ಯ ಇಷ್ಟು ದಿನಗಳ ಕಾಲ ಪ್ರಾಧಿಕಾರದ ಆದೇಶ ಪಾಲನೆ ಮಾಡಿದೆ. ಬರ ಹಿನ್ನೆಲೆಯಲ್ಲಿ ಪ್ರಸ್ತುತ ಕಾವೇರಿ ನದಿಯ ಆಣೆಕಟ್ಟುಗಳಲ್ಲಿ ಇರುವ ನೀರು ರಾಜ್ಯದ ಜನ ಹಾಗೂ ಪ್ರಾಣಿ ಪಕ್ಷಿಗಳ ಕುಡಿಯುವ ಉದ್ದೇಶಕ್ಕೆ, ಕೈಗಾರಿಕೆ ಹಾಗೂ ಹಾಲಿ ಬೆಳೆಗಳಿಗೆ ನೀಡಲು ಮಾತ್ರ ಸಾಲುತ್ತದೆ. ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಕರ್ನಾಟಕ ನೀರು ಹರಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು, ಪ್ರಾಧಿಕಾರ ತನ್ನ ಆದೇಶ ಮರುಪರಿಶೀಲಿಸುವಂತೆ ಸೂಚಿಸಬೇಕು ಎಂದು ಮನವಿ ಮಾಡಲಾಗಿದೆ.”