
Cauvery Water to Tamil Nadu | Meeting with Union Jal Shakti Minister tomorrow: DCM D.K.Shivakumar
ನವದೆಹಲಿ/ಬೆಂಗಳೂರು:
“ಕಾರಣಾಂತರಗಳಿಂದ ಕೇಂದ್ರ ಜಲಶಕ್ತಿ ಸಚಿವರನ್ನು ಇಂದಿನ ಬದಲು ನಾಳೆ (ಗುರುವಾರ) ಬೆಳಿಗ್ಗೆ ಭೇಟಿ ಮಾಡಲಾಗುವುದು” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು “ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಇಂದು (ಬುಧವಾರ) ಸಂಜೆ ಭೇಟಿ ಮಾಡಿಸುವುದಾಗಿ ಹೇಳಿದ್ದರು. ಅವರು ರಾಜಸ್ಥಾನದಿಂದ ಬರುವುದು ತಡವಾಗುವ ಕಾರಣ ಭೇಟಿ ಮುಂದೂಡಲಾಗಿದೆ” ಎಂದರು.
“ನಾನು, ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು ದೆಹಲಿಯಲ್ಲೇ ಇರಲಿದ್ದು, ಮಧ್ಯರಾತ್ರಿಯಾದರೂ ಸರಿ ಸಚಿವರನ್ನು ಭೇಟಿ ಮಾಡಲು ತಯಾರಿದ್ದೇವೆ. ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲು ರಾಜ್ಯದ ಕಾನೂನು ತಂಡ ಸಿದ್ದವಾಗಿದ್ದು, ಸಮರ್ಥವಾಗಿ ವಾದ ಮಾಡಲಿದೆ” ಎಂದು ಹೇಳಿದರು.
ಗುರುವಾರ ಬೆಳಿಗ್ಗೆ ಸರ್ವಪಕ್ಷ ಸಂಸದರ ಸಭೆಯಲ್ಲಿ ಕಾವೇರಿ ವಿಚಾರವಾಗಿ ಪಕ್ಷಾತೀತವಾಗಿ ರಾಜ್ಯಕ್ಕೆ ಬೆಂಬಲ ನೀಡಲಾಗುವುದು ಎಂದು ತೀರ್ಮಾನಕ್ಕೆ ಬರಲಾಗಿತ್ತು. ಹಾಗೂ ಬುಧವಾರ ಸಂಜೆ 4.30 ಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಲು ವೇಳಾಪಟ್ಟಿ ಸಿದ್ದವಾಗಿತ್ತು. ಆದರೆ ಇದು ಬದಲಾಗಿದೆ.