Home ಬೆಂಗಳೂರು ನಗರ Cauvery water to Tamil Nadu | ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳಿಂದ ರಾಜಕೀಯ ಆಯಾಮ:...

Cauvery water to Tamil Nadu | ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳಿಂದ ರಾಜಕೀಯ ಆಯಾಮ: ಡಿ.ಕೆ. ಶಿವಕುಮಾರ್ ಆರೋಪ

36
0
Cauvery water to Tamil Nadu | opposition parties trying to politicise Cauvery issue: D.K. Shivakumar
Cauvery water to Tamil Nadu | opposition parties trying to politicise Cauvery issue: D.K. Shivakumar

ಬೆಂಗಳೂರು:

“ರಾಜ್ಯದ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಆದರೂ ವಿರೋಧ ಪಕ್ಷಗಳು ಕಾವೇರಿ ಸಮಸ್ಯೆಗೆ ರಾಜಕೀಯ ಆಯಾಮ ನೀಡುತ್ತಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು: “ಕಾವೇರಿ ನೀರು ಹರಿಸುವ ವಿಚಾರವಾಗಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಬಂದ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಯಾರೊಬ್ಬರೂ ಕಾನೂನು ಕೈಗೆ ಎತ್ತಿಕೊಳ್ಳಬಾರದು.”

ನಾವು ನಮ್ಮ ರಾಜ್ಯದ ಹಿತ ಕಾಯುತ್ತಿದ್ದೇವೆ. ಹೋರಾಟ ಮಾಡಬಾರದು ಎಂದು ನಾವು ಹೇಳುವುದಿಲ್ಲ. ರೈತ ಸಂಘಟನೆ, ಕನ್ನಡ ಸಂಘಟನೆಗಳು, ಚಿತ್ರರಂಗ, ವಿರೋಧ ಪಕ್ಷಗಳ ಹೋರಾಟಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು”

ಇಂತಹ ಸಂಕಷ್ಟದ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಿಮ್ಮ ಜೊತೆ ನಿಲ್ಲಬೇಕಿತ್ತಲ್ಲವೆ ಎಂದು ಕೇಳಿದಾಗ, “ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಅವರು ಹೊಸ ಹುರುಪಿನಲ್ಲಿ ಅವರದೇ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರು ನೀರಿನಲ್ಲಿ ರಾಜಕಾರಣ ಮಾಡಿದರೆ, ನಾವು ರೈತರನ್ನು ಕಾಪಾಡುತ್ತಿದ್ದೇವೆ. ರಾಜ್ಯದ ಹಿರಿಯ ನಾಯಕರಾದ ದೇವೇಗೌಡರು ಎಕನಾಮಿಕ್ ಟೈಮ್ಸ್ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಯಾವ ಸಲಹೆ ಕೊಟ್ಟಿದ್ದಾರೆ ಎಂದು ನೀವೇ ಹೇಳಿ. ನಾನು ಏನಾದರೂ ಹೇಳಿದರೆ ಅದು ರಾಜಕಾರಣ ಆಗುತ್ತದೆ. ನೀವು ಈ ಸಂದರ್ಶನ, ಅದರಲ್ಲಿ ದೇವೇಗೌಡರು ಏನು ಹೇಳಿದ್ದಾರೆ ಎಂಬುದನ್ನು ನೋಡಿದರೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ” ಎಂದು ತಿಳಿಸಿದರು.

ಕಾವೇರಿ ಕರ್ನಾಟಕದ ಆಸ್ತಿ ಅಲ್ಲ ಎಂಬ ಡಿಎಂಕೆ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಹೌದು ಕಾವೇರಿ ಇಡೀ ದಕ್ಷಿಣ ಭಾರತದ ಆಸ್ತಿ” ಎಂದು ತಿಳಿಸಿದರು.

ಅಮಿತ್ ಶಾ ಮೈತ್ರಿ ಚರ್ಚೆಗೆ ಕಾಲಾವಕಾಶ ನೀಡುತ್ತಾರೆ, ಸರ್ಕಾರಕ್ಕೆ ಭೇಟಿ ಅವಕಾಶ ನೀಡುವುದಿಲ್ಲವಲ್ಲ ಎಂದು ಕೇಳಿದಾಗ, “ಕುಮಾರಸ್ವಾಮಿ ಅವರು ಕಾವೇರಿ ವಿಚಾರವಾಗಿ ಚರ್ಚೆ ಮಾಡಿದ್ದೇವೆ ಎಂದು ಹೇಳಿರುವ ಬಗ್ಗೆ ವರದಿ ಬಂದಿದೆ. ಅವರು ಏನು ಚರ್ಚೆ ಮಾಡಿದ್ದಾರೆ, ಅವರ ನುಡಿಮುತ್ತು ಏನು ಎಂದು ಹೇಳಿದರೆ ನಾವು ಕೇಳುತ್ತೇವೆ” ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರು ತಮಿಳುನಾಡಿನ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾವೇನೂ ಮೂರ್ಖರೇ? ರಾಜ್ಯದ ಹಾಗೂ ಎಲ್ಲಾ ರೈತರ ರಕ್ಷಣೆ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಬೆಂಗಳೂರು ಬಂದ್ ಗೆ ಕರೆ ನೀಡಿರುವ ಬಗ್ಗೆ ಕೇಳಿದಾಗ, “ಬೆಂಗಳೂರಿನ ಘನತೆಗೆ ಧಕ್ಕೆ ಮಾಡಿದರೆ ನಿಮ್ಮ ಹೃದಯಕ್ಕೆ ನೀವೇ ಚುಚ್ಚಿಕೊಂಡಂತೆ. ನಾವು ಎಲ್ಲಾ ರೀತಿಯಲ್ಲಿ ರೈತರ ಹಿತ ಕಾಯುತ್ತಿದ್ದೇವೆ. ಈ ಬಂದ್ ನಿಂದ ಅವರಿಗೆ ಏನು ಲಾಭ? ಲಾಭ ಆಗುವುದಿದ್ದರೆ ಮಾಡಲಿ. ನಿಮ್ಮ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ದಯಮಾಡಿ ಬಂದ್ ನಂತಹ ತಪ್ಪು ಮಾಡಬೇಡಿ” ಎಂದು ತಿಳಿಸಿದರು.

ಇಂಡಿಯಾ ಒಕ್ಕೂಟದಲ್ಲಿ ಸೋನಿಯಾ ಗಾಂಧಿ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಕೇಳಿದಾಗ, “ಪ್ರಧಾನಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ. ಸಿ. ಟಿ ರವಿ ಅವರಿಗೆ ಎಲ್ಲೂ ಜಾಗ ಇಲ್ಲ. ಅದಕ್ಕೆ ಹೋರಾಟ ಮಾಡಿ ಮಂಡ್ಯದಲ್ಲಿ ಏನಾದರೂ ಜಾಗ ಸಿಗುತ್ತಾ ಎಂದು ನೋಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು

LEAVE A REPLY

Please enter your comment!
Please enter your name here