ಬೆಂಗಳೂರು:
ಕೋರಮಂಗಲ 80 ಫೀಟ್ ರಸ್ತೆಯಲ್ಲಿರುವ ಪಬ್’ವೊಂದರ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದು ಅಕ್ರಮ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಬಾರ್‌ನಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಪರವಾನಗಿ ನಿಬಂಧನೆಗಳನ್ನು ಉಲ್ಲಂಘಿಸಿ ಡ್ಯಾನ್ಸ್ ಬಾರ್ ನಡೆಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದ್ದು, 28 ಮಹಿಳೆಯರನ್ನು ರಕ್ಷಿಸಲಾಗಿದೆ.
ದಾಳಿ ವೇಳೆ ಪಬ್ ನಲ್ಲಿದ್ದ 21 ಮಂದಿ ಗ್ರಾಹಕರಿಂದ ಲಕ್ಷಾಂತರ ರುಪಾಯಿ ವಶಕ್ಕೆ ಪಡೆದಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಬಾರ್ಟೆಂಡರ್ ಕೆಲಸಕ್ಕೆ ನೇಮಿಸಿಕೊಳ್ಳುವ ನೆಪದಲ್ಲಿ ಮಹಿಳೆಯರನ್ನು ನಗರಕ್ಕೆ ಕರೆತಂದಿದ್ದು, ನಂತರ ಸುಲಭವಾಗಿ ಹಣಕ್ಕಾಗಿ ಗಳಿಸಲು ಬಾರ್ ನಲ್ಲಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದಾರೆ.
ಪಾರ್ಟಿ ಮುಗಿದ ನಂತರ ಆರೋಪಿಗಳು ಮಹಿಳೆಯರನ್ನು ಪಬ್‌ನ ಮೊದಲ ಮತ್ತು ಎರಡನೇ ಮಹಡಿಯಲ್ಲಿನ ಕೊಠಡಿಗಳಲ್ಲಿ ಕೂಡಿ ಹಾಕುತ್ತಿದ್ದರು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳಿಂದ 2,325 ಟೋಕನ್, ಸೌಂಡ್ ಸಿಸ್ಟಮ್, ಸ್ವೈಪಿಂಗ್ ಮಿಷನ್ ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
