Home ಅಪರಾಧ ಸಿ.ಡಿ ಆರೋಪಿಗಳ ವಿಡಿಯೋ ಹೇಳಿಕೆ: ನಂಗೊತ್ತಿಲ್ಲ ಎಂಬ ಮಾತು ನಂಬಬೇಕೆ?

ಸಿ.ಡಿ ಆರೋಪಿಗಳ ವಿಡಿಯೋ ಹೇಳಿಕೆ: ನಂಗೊತ್ತಿಲ್ಲ ಎಂಬ ಮಾತು ನಂಬಬೇಕೆ?

106
0
ಚಿತ್ರ ಕ್ರೆಡಿಟ್: https://vijaykarnataka.com/

ಬೆಂಗಳೂರು:

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಶಂಕಿತ ಆರೋಪಿಗಳು ಇಂದು(ಮಾ.18-ಗುರುವಾರ) ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮಾಜಿ ಪತ್ರಕರ್ತರಾದ ನರೇಶ್ ಗೌಡ ಹಾಗೂ ಭವಿತ್ ಬಿಡುಗಡೆ ಮಾಡಿರುವ ಹೇಳಿಕೆಗಳು ರಾಜ್ಯದ ಗಮನ ಸೆಳೆದಿವೆ. ಇಬ್ಬರೂ ಶಂಕಿತ ಆರೋಪಿಗಳು ಸಿ.ಡಿ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದೇ ಹೇಳಿದ್ದು, ಪ್ರಕರಣದಲ್ಲಿ ವಿನಾಕಾರಣ ತಮ್ಮನ್ನು ಎಳೆದು ತರಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಓರ್ವ ಶಂಕಿತ ಆರೋಪಿಯಾದ ನರೇಶ್ ಗೌಡ ಮಾತ್ರ ಸಿ.ಡಿಯಲ್ಲಿರುವ ಯುವತಿ ತಮಗೆ ಪರಿಚಯ ಎಂದು ಹೇಳಿದ್ದು, ಆದರೆ ಸಿ.ಡಿ ಪ್ರಕರಣದಲ್ಲಿ ಮಾತ್ರ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಮತ್ತೋರ್ವ ಶಂಕಿತ ಭವಿತ್ ಪ್ರಕರಣದ ತನಿಖೆ ನಡೆದು ಸಂಪೂರ್ಣ ಸತ್ಯಾಂಶ ಹೊರಬರುವವರೆಗೂ ತಮ್ಮನ್ನು ಶಂಕೆಯಿಂದ ಕಾಣಬೇಡಿ ಎಂದು ಮನವಿ ಮಾಡಿದ್ದಾನೆ. ಹಾಗಾದರೆ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಶಂಕಿತ ಆರೋಪಿಗಳಾದ ನರೇರಶ್ ಗೌಡ ಮತ್ತು ಭವಿತ್ ಅವರ ವಿಡಿಯೋ ಹೇಳಿಕೆಗಳನ್ನು ಗಮನಿಸುವುದಾದರೆ…

ನರೇಶ್ ಗೌಡ ಹೇಳಿದ್ದೇನು?

ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿರುವ ಪತ್ರಕರ್ತ ನರೇಶ್ ಗೌಡ, ಇಂದು(ಮಾ.18-ಗುರುವಾರ) ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಪ್ರಕರಣದಲ್ಲಿ ನನ್ನ ಹೆಸರನ್ನು ವ್ಯವಸ್ಥಿತವಾಗಿ ಸೇರಿಸಲಾಗುತ್ತಿದೆ. ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ನರೇಶ್ ಹೇಳಿದ್ದಾನೆ.

ಆದರೆ ಸಿ.ಡಿಯಲ್ಲಿರುವ ಯುವತಿ ತನಗೆ ಪರಿಚಯವಿದೆ ಎಂದು ಒಪ್ಪಿಕೊಂಡಿರುವ ನರೇಶ್, ಪತ್ರಕರ್ತನಾಗಿರುವ ಕಾರಣಕ್ಕೆ ಸಿ.ಡಿಯಲ್ಲಿರುವ ಯುವತಿ ನನಗೆ ಪರಿಚಯವಿದ್ದಿದ್ದು ನಿಜ ಎಂದು ಹೇಳಿದ್ದಾನೆ.ಸ್ನೇಹಿತನ ಮೂಲಕ ನನ್ನ ನಂಬರ್‌ ತೆಗೆದುಕೊಂಡು ಆಕೆ ನನಗೆ ಕರೆ ಮಾಡಿದ್ದಳು. ರಮೇಶ್ ಜಾರಕಿಹೊಳಿಯಿಂದ ನನಗೆ ತೊಂದರೆ ಇದೆ ಎಂದು ಹೆಳಿ ಸಹಾಯ ಕೇಳಿದ್ದಳು ಎಂದು ನರೇಶ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾನೆ.

ಅಷ್ಟೇ ಅಲ್ಲದೇ ನನ್ನ ಮಗುವಿನ ನಾಮಕರಣಕ್ಕೂ ಆ ಯುವತಿ ಬಂದಿದ್ದಳು ಎಂದು ನರೇಶ್‌ ಗೌಡ ತಿಳಿಸಿದ್ದಾನೆ. ಇದರಿಂದ ನರೇಶ್‌ಗೂ ಹಾಗೂ ಸಿ.ಡಿ ಯುವತಿಗೂ ಆಪ್ತ ಗೆಳೆತನವಿರುವುದು ಖಚಿತವಾಗಿದೆ.

ಭವಿತ್ ಹೇಳಿದ್ದೇನು?

ಇನ್ನು ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ಮತ್ತೋರ್ವ ಶಂಕಿತ ಆರೋಪಿ ಭವಿತ್ ಕೂಡ ಇಂದು(ಮಾ.18-ಗುರುವಾರ) ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಅಲ್ಲದೇ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.

ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿರುವ ಭವಿತ್, ಈಗಾಗಲೇ ನಾನು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗಿದ್ದೇನೆ. ಸುಖಾಸುಮ್ಮನೆ ನನ್ನ ಹೆಸರನ್ನು ಸಿ.ಡಿ ಪ್ರಕರಣದಲ್ಲಿ ಎಳೆದು ತರುತ್ತಿರುವುದು ನನಗೆ ಬೇಸರ ತರಿಸಿದೆ ಎಂದು ಅಲವತ್ತುಕೊಂಡಿದ್ದಾನೆ.

ನನ್ನ ತಾಯಿ ಹಾರ್ಟ್‌ ಪೆಷೆಂಟ್‌, ಮನೆಯ ಪರಿಸ್ಥಿತಿ ಬಂದು ನೋಡಿ. ಏನು ತಿಳಿದುಕೊಳ್ಳದೇ ನಮ್ಮ ಕುಟುಂಬದ ಗೌರವವನ್ನು ಹಾಳು ಮಾಡುವ ಕೆಲಸ ಮಾಡಬೇಡಿ ಎಂದು ಭವಿತ್ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾನೆ. ನಾನು ಎಲ್ಲೂ ನಾಪತ್ತೆಯಾಗಿಲ್ಲ. ಎಸ್‌ಐಟಿ ವಿಚಾರಣೆಗೆ ಸಹಕರಿಸುತ್ತಿದ್ದೇನೆ. ತನಿಖೆ ನಡೆದು ನಾನು ತಪ್ಪಿತಸ್ಥ ಅಂತ ಸಾಬೀತಾದರೆ ನನ್ನ ವಿರುದ್ಧ ಮಾತನಾಡಿ ಎಂದು ಭವಿತ್ ವಿಡಿಯೋದಲ್ಲಿ ಗುಡುಗಿದ್ದಾನೆ.

ಮೊದಲು ಸಿ.ಡಿ ಮಾಹಿತಿ ಕೊಟ್ಟಿದ್ದೇ ನಾನೆಂದ ಎಚ್‌ಡಿಕೆ!

HD Kumarswamy

ಇನ್ನು ರಮೇಶ್ ಜಾರಕಿಹೊಳಿ ಸಿ.ಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಜರಕಿಹೊಳಿ ಸಿ.ಡಿ ಮಾಹಿತಿಯನ್ನು ಮೊದಲು ಕೊಟ್ಟಿದ್ದು ತಾವೇ ಎಂದು ಹೇಳಿದ್ದಾರೆ. ನಗರದ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಚ್‌ಡಿಕೆ, ಸಿ.ಡಿ ಪ್ರಕರಣದಲ್ಲಿ ಕೈವಾಡವಿರುವ ಮಹಾನ್ ನಾಯಕ ಯಾರು ಎಂಬುದರ ಬಗ್ಗೆ ನನಗೆ ಮಾಹಿತಿ ಇದೆ ಎಂದು ಹೇಳಿದರು.

ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಟ್ವೀಟ್ ವಾರ್ ರಾಜ್ಯದ ಜನರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದು, ಇದಕ್ಕಾಗಿಯೇ ಸುಮ್ಮನಿದ್ದೇನೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು. ಫೋಟೋಗಳನ್ನು ಹಾಕಿಕೊಂಡು ಆರೋಪ-ಪ್ರತ್ಯಾರೋಪ ಮಾಡುವುದು ಸರಿಯಲ್ಲ ಎಂದು ಎಚ್‌ಡಿಕೆ ನುಡಿದರು.

ಶಂಕಿತ ಆರೋಪಿಗಳ ಮಾತು ನಿಜವೇ?

Ramesh Jarkiholi and girl
ಚಿತ್ರ ಕ್ರೆಡಿಟ್: https://tv9kannada.com/

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಶಂಕಿತ ಆರೋಪಿಗಳಾದ ನರೇಶ್ ಗೌಡ ಹಾಗೂ ಭವಿತ್ ಅವರ ವಿಡಿಯೋ ಹೇಳಿಕೆಗಳು ರಾಜ್ಯದ ಗಮನ ಸೆಳೆದಿವೆ. ಶಂಕಿತ ಆರೋಪಿಗಳು ಹೇಳುತ್ತಿರುವುದು ನಿಜವೇ ಎಂಬ ಚರ್ಚೆ ಶುರುವಾಗಿದೆ.

ಹೆಸರು ಕೇಳಿ ಬಂದಿದೆ ಅಂದಾಕ್ಷಣ ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದರ್ಥವಲ್ಲ. ಆದರೆ ತಪ್ಪು ಮಾಡಿಲ್ಲ ಎಂದಾದರೆ ನೇರವಾಗಿ ಜನರ ಮುಂದೆ ಬರದೇ ವಿಡಿಯೋ ಹೇಳಿಕೆಗಳನ್ನೇಕೆ ಬಿಡುಗಡೆ ಮಾಡಿದ್ದಾರೆ ಎಂಬ ಪ್ರಶ್ನೆಯೂ ಕಾಡುತ್ತಿದೆ.

ನಾನು ಪೊಲೀಸರೆದುರು ಬಂದರೆ ನನ್ನ ಪರಿಸ್ಥಿತಿ ಏನಾಗಲಿದೆ ಎಂಬುದು ನನಗೆ ಗೊತ್ತು ಎಂದಿರುವ ನರೇಶ್ ಗೌಡ, ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯದು ಎಂದು ಹೇಳಿದ್ದಾನೆ. ಆದರೆ ಇದೊಂದೇ ಕಾರಣಕ್ಕೆ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದರೆ ಅದನ್ನು ನಂಬುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸದೇ ಇರದು.

ಸೌಜನ್ಯ: https://vijaykarnataka.com/news/karnataka/two-accused-in-ramesh-jarkiholis-cd-row-released-video-statement/articleshow/81574505.cms

LEAVE A REPLY

Please enter your comment!
Please enter your name here