ಬೆಂಗಳೂರು:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರ ದೂರಿನ (ದೂರು ವಾಪಸ್ ಹಿಂಪಡೆದಿದ್ದರೂ) ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿರುವುದು ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಸಿಡಿಯಲ್ಲಿ ರಮೇಶ್ ಜಾರಕಿಹೊಳಿ ಜತೆ ಇದ್ದ ನಿಡಗುಂದಿಯ ಯುವತಿಯ ಮನೆ ಮುಂದೆ ನಗರದ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ನೋಟಿಸ್ ಅಂಟಿಸಿದ್ದಾರೆ.
ಸಿಡಿ ಹೊರಬಂದು 12 ದಿನ ಕಳೆದರೂ ಯುವತಿ ಅಜ್ಞಾತವಾಸದಲ್ಲಿರುವುದರಿಂದ ಆಕೆಯ ವಾಟ್ಸಪ್, ಇ-ಮೇಲ್ ಐಡಿಗೆ ನೋಟಿಸ್ ರವಾನಿಸಲಾಗಿದೆ. ಇದರ ಜತೆಗೆ ಆಕೆ ವಾಸ ಮಾಡುತ್ತಿದ್ದ ಮನೆ ಮಾಲೀಕರಿಗೆ, ಸ್ನೇಹಿತರಿಗೆ ಹಾಗೂ ವಿಜಯಪುರ ಜಿಲ್ಲೆಯಲ್ಲಿರುವ ಯುವತಿ ನಿವಾಸದ ಅಕ್ಕಪಕ್ಕದವರಿಗೂ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಯುವತಿ ಈ ಕೂಡಲೇ ವಿಚಾರಣೆಗೆ ಹಾಜರಾಗಬೇಕು ಎಂದು ಕಬ್ಬನ್‍ಪಾರ್ಕ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.