ಬೆಂಗಳೂರು:
ಸ್ಮಶಾನ ಹಾಗೂ ಕೆರೆ ಜಮೀನನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿ, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕಠಿಣ ಹಾಗೂ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದು, “ಇದು ಸಂಪೂರ್ಣವಾಗಿ ನಮ್ಮ ಪಿತ್ರಾರ್ಜಿತ ಆಸ್ತಿ. ಯಾವುದೇ ಅನುಮಾನ ಇದ್ದರೆ ಸ್ವತಂತ್ರ ತನಿಖೆ ನಡೆಸಲಿ” ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಗರುಡಪಾಳ್ಯದಲ್ಲಿರುವ ವಿವಾದಿತ ಜಮೀನು ತಮ್ಮ ತಾತನವರು ಕಾನೂನುಬದ್ಧವಾಗಿ ಖರೀದಿಸಿದ ಆಸ್ತಿಯಾಗಿದ್ದು, ನಂತರ ಕುಟುಂಬದಲ್ಲಿ ಹಂಚಿಕೆಯ ಮೂಲಕ ತಮಗೆ ದೊರೆತಿರುವುದಾಗಿ ಸ್ಪಷ್ಟಪಡಿಸಿದರು.
“ಇದು ಯಾವುದೇ ಗ್ರಾಂಟ್ ಜಮೀನಲ್ಲ, ಒತ್ತುವರಿಯಲ್ಲ, ನನ್ನ ಸಚಿವ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಪಡೆದ ಆಸ್ತಿಯೂ ಅಲ್ಲ” ಎಂದು ಅವರು ಹೇಳಿದರು.
ಸ್ಮಶಾನ ಹಾಗೂ ಕೆರೆ ಜಮೀನು ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು,
“ದಾಖಲೆಗಳನ್ನು ಯಾರು ಬೇಕಾದರೂ ಪರಿಶೀಲಿಸಲಿ. ಲೋಕಾಯುಕ್ತ, ಜಿಲ್ಲಾಧಿಕಾರಿ ಅಥವಾ ನ್ಯಾಯಾಲಯ — ಯಾರಿಂದ ತನಿಖೆ ಬೇಕಾದರೂ ನಡೆಸಲಿ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ” ಎಂದು ತಿಳಿಸಿದರು.
ರಾಜಕೀಯ ಪ್ರೇರಿತ ಆರೋಪಗಳ ಬಗ್ಗೆ ಕಿಡಿಕಾರಿದ ಸಚಿವರು,
“ಇಲ್ಲಸಲ್ಲದ ಆರೋಪ ಮಾಡಿ ಕೆಸರೇರಚಾಟ ಮಾಡುವುದೇ ಕೆಲವರ ರಾಜಕೀಯ ಸಂಸ್ಕೃತಿ. ಆದರೆ ಸತ್ಯ ಯಾವತ್ತೂ ತನಿಖೆಯಲ್ಲಿ ಹೊರಬರುತ್ತದೆ” ಎಂದರು.
“ನಾನೇ ಕಂದಾಯ ಸಚಿವನಾಗಿ ನನ್ನ ವಿರುದ್ಧ ತನಿಖೆ ನಡೆಸುವಂತೆ ಸೂಚನೆ ಕೊಟ್ಟರೆ ಅದಕ್ಕೂ ಟೀಕೆ ಮಾಡುತ್ತಾರೆ. ಆದ್ದರಿಂದ ಸ್ವತಂತ್ರ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಲಿ” ಎಂದು ಅವರು ಹೇಳಿದರು.
ಸಾರ್ವಜನಿಕ ಜೀವನದಲ್ಲಿ ಸತ್ಯ ಹಾಗೂ ಕಾನೂನು ಮೇಲೆಯೇ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದ ಸಚಿವರು,
“ತನಿಖೆಯಲ್ಲಿ ಏನಾದರೂ ತಪ್ಪು ಸಾಬೀತಾದರೆ ನಾನು ಕೂಡ ಕಾನೂನಿಗೆ ತಲೆಬಾಗುತ್ತೇನೆ” ಎಂದು ಹೇಳಿದರು.
Also Read: Krishna Byre Gowda Rejects Land Allegations, Calls for Independent Lokayukta Investigation
Also Read: Grave Allegations: How Did Cemetery & Lake Land End Up in Karnataka Revenue Minister’s Name?
ಇದನ್ನೂ ಓದಿ: ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ಸ್ಮಶಾನ ಮತ್ತು ಕೆರೆ ಭೂಮಿ ವರ್ಗಾವಣೆ ಆರೋಪ; ರಾಜೀನಾಮೆಗೆ ವಿಪಕ್ಷ ಆಗ್ರಹ
