
ನವದೆಹಲಿ/ಬೆಂಗಳೂರು: ಮಕ್ಕಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮಕ್ಕಳಲ್ಲಿ ಕೆಮ್ಮು ಸಿರಪ್ ಬಳಕೆಯನ್ನು ನಿಯಂತ್ರಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸದಾಗಿ ಸಲಹೆ ಹೊರಡಿಸಿದೆ. ಮಕ್ಕಳಲ್ಲಿ ಕಾಣಿಸುವ ಹೆಚ್ಚಿನ ಕೆಮ್ಮು ಮತ್ತು ಶೀತ ಸಂಬಂಧಿ ರೋಗಗಳು ಸ್ವತಃ ಗುಣವಾಗುತ್ತವೆ; ಅತಿಯಾಗಿ ಔಷಧೋಪಚಾರ ಅಗತ್ಯವಿಲ್ಲವೆಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಸೂಚನೆಯ ಪ್ರಕಾರ, 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು-ಶೀತದ ಔಷಧಿಗಳನ್ನು ನೀಡಬಾರದು. 5 ವರ್ಷದೊಳಗಿನ ಮಕ್ಕಳಿಗೆ ಕೂಡ ಕಡ್ಡಾಯವಾಗಿ ವೈದ್ಯರ ಮೇಲ್ವಿಚಾರಣೆ, ಸರಿಯಾದ ಪ್ರಮಾಣ, ಕಡಿಮೆ ಅವಧಿ ಹಾಗೂ ಒಟ್ಟಿಗೇ ಹಲವಾರು ಔಷಧಿ ನೀಡುವುದನ್ನು ತಪ್ಪಿಸಬೇಕು ಎಂದು ಎಚ್ಚರಿಸಲಾಗಿದೆ. ಪಾಲಕರಿಗೆ ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದೂ ಸಲಹೆ ನೀಡಲಾಗಿದೆ.
ಇದೇ ವೇಳೆ, ಮಕ್ಕಳ ಆರೋಗ್ಯದ ಮೊದಲ ಹಂತದ ಚಿಕಿತ್ಸೆಗಾಗಿ ಜಲೋಪಚಾರ, ಸಮರ್ಪಕ ವಿಶ್ರಾಂತಿ, ಪೋಷಕ ಆಹಾರ ಮುಂತಾದ ಔಷಧೇತರ ಕ್ರಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ ಎಂದು ಸಚಿವಾಲಯ ತಿಳಿಸಿದೆ.
ಅದೇ ರೀತಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಎಲ್ಲಾ ಆರೋಗ್ಯ ಸಂಸ್ಥೆಗಳು ಉತ್ತಮ ಉತ್ಪಾದನಾ ನಿಯಮಾವಳಿಗಳ (GMP) ಪ್ರಕಾರ ತಯಾರಾಗಿರುವ ಗುಣಮಟ್ಟದ ಉತ್ಪನ್ನಗಳನ್ನಷ್ಟೇ ಖರೀದಿಸಿ ಬಳಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಸಂಸ್ಥೆಗಳು ಈ ಸಲಹೆಯನ್ನು ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಮಟ್ಟದಲ್ಲಿ ಜಾರಿಗೊಳಿಸಿ ಜನರಿಗೆ ತಿಳಿಸಬೇಕು ಎಂದು ಸೂಚಿಸಲಾಗಿದೆ.
ಈ ಸಲಹೆಯನ್ನು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕಿ ಡಾ. ಸುನೀತಾ ಶರ್ಮಾ ಸಹಿ ಮಾಡಿದ್ದಾರೆ.