ಬೆಂಗಳೂರು:
ವೃತ್ತಿಶಿಕ್ಷಣಕ್ಕೆ ಪ್ರವೇಶಾವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಈ ಬಾರಿ ಜೂನ್ 16, 17 ಮತ್ತು 18ರಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಬಗ್ಗೆ ಸೋಮವಾರ ಮಾತನಾಡಿದ ಅವರು, ಬೇರೆಬೇರೆ ರಾಜ್ಯಗಳಲ್ಲಿ ಇಂತಹ ಪರೀಕ್ಷೆಗೆ ಗೊತ್ತುಪಡಿಸಿಕೊಂಡಿರುವ ಸಂಭವನೀಯ ದಿನಾಂಕಗಳ ಬಗ್ಗೆ ತಿಳಿದುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಇದರಂತೆ ಜೂನ್ 16ರಂದು ಬೆಳಿಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 17ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಹಾಗೂ 18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಸಿಇಟಿ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದರಂತೆ, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 5ರಿಂದ 20ರವರೆಗೆ ಸಿಇಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ಲೈನ್ ಮೂಲಕವೇ ನಿಗದಿತ ಶುಲ್ಕ ಸಲ್ಲಿಸಲು ಏ.22ರವರೆಗೆ ಅವಕಾಶವಿದೆ.
ಶುಲ್ಕ ಪಾವತಿಸಿದ ನಂತರ, ತಮ್ಮ ಅರ್ಜಿಯಲ್ಲೇನಾದರೂ ಮಾಹಿತಿಯನ್ನು ಪರಿಷ್ಕರಿಸುವುದಿದ್ದರೆ ಅಂಥವರಿಗೇ ಮೇ 2ರಿಂದ 6ವರೆಗೆ ಕಾಲಾವಕಾಶ ಇರಲಿದೆ. ಇದಾದ ಬಳಿಕ ವಿದ್ಯಾರ್ಥಿಗಳು ಮೇ 30ರಿಂದ ಪ್ರವೇಶಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸಚಿವರು ವಿವರಿಸಿದ್ದಾರೆ.