ಚಾಮರಾಜನಗರ, ಸೆಪ್ಟೆಂಬರ್ 10: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹುಲಿ ಮತ್ತು ಚಿರತೆ ಕಾಟದಿಂದ ತತ್ತರಿಸಿದ ರೈತರು ತಮ್ಮ ಕೋಪವನ್ನು ಹೊರಹಾಕುತ್ತಾ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಮೃಗಗಳನ್ನು ಹಿಡಿಯಲು ಇಟ್ಟಿದ್ದ ಬೋನಿನಲ್ಲೇ ಅರ್ಧ ಗಂಟೆ ಕಾಲ ಹಾಕಿದ ಘಟನೆ ನಡೆದಿದೆ. ಈ ಘಟನೆ ಬಳಿಕ, ಅರಣ್ಯ ಇಲಾಖೆ ಐದು ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ವೈಲ್ಡ್‌ಲೈಫ್ ದಾಳಿಯಿಂದ ರೈತರ ಬೇಸರ
ಅರಣ್ಯ ಅಂಚಿನಲ್ಲಿರುವ ರೈತರು ಹುಲಿ–ಚಿರತೆಗಳು ನಿರಂತರವಾಗಿ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿವೆ, ಬೆಳೆ ನಾಶ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ದೂರುಗಳಿದ್ದರೂ ಅರಣ್ಯ ಇಲಾಖೆ ಸರಿಯಾದ ಕ್ರಮ ಕೈಗೊಂಡಿಲ್ಲ, ಕೇವಲ ಬೋನನ್ನು ಇಡುವುದರ ಮೂಲಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ರೈತರು ಆರೋಪಿಸಿದರು.

ಕೋಪಗೊಂಡ ರೈತರು ಈ ಬೋನಿನಲ್ಲೇ ಅಧಿಕಾರಿಗಳನ್ನು ಹಾಕಿ ಅವರಿಗೂ ತಮಗೆ ಆಗುತ್ತಿರುವ ನೋವನ್ನು ತೋರಿಸಿದರು.
ಅರಣ್ಯ ಇಲಾಖೆಯ ಪ್ರತಿಕ್ರಿಯೆ ಮತ್ತು ಎಫ್‌ಐಆರ್
ಈ ಘಟನೆ ನಂತರ ಬಂಡಿಪುರ ಸಿಎಫ್ (ಮುಖ್ಯ ಅರಣ್ಯ ಸಂರಕ್ಷಕ) ಅವರ ನಿರ್ದೇಶನದಂತೆ, ಗುಂಡ್ಲುಪೇಟೆ ಠಾಣೆಯಲ್ಲಿ ಐದು ರೈತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದರಿಂದ ರೈತರು ಇನ್ನಷ್ಟು ಕೋಪಗೊಂಡು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಎಚ್ಚರಿಕೆ
“ನಮ್ಮ ಜಾನುವಾರು–ಬೆಳೆಗಳನ್ನು ಮೃಗಗಳು ನಾಶ ಮಾಡುತ್ತಿದ್ದರೂ ಪರಿಹಾರ ಸಿಗುವುದಿಲ್ಲ. ಆದರೆ ಪ್ರಶ್ನೆ ಮಾಡಿದ್ರೆ ನಮ್ಮ ಮೇಲೆಯೇ ಕೇಸು ಹಾಕುತ್ತಾರೆ. ಇದು ನ್ಯಾಯವೇ?” ಎಂದು ರೈತರು ಪ್ರಶ್ನಿಸಿದ್ದಾರೆ.
ಕೇಸು ತಕ್ಷಣವೇ ಹಿಂತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಆರಂಭಿಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಪರಿಹಾರದ ವಿರುದ್ಧ ಆಕ್ರೋಶ
ರೈತರು ತಮ್ಮ ಬೆಳೆ ಹಾನಿಗೆ ಕೇವಲ ₹751 ಪರಿಹಾರ ನೀಡಿರುವುದನ್ನು ಅವಮಾನಕಾರಿ ಕ್ರಮ ಎಂದು ಖಂಡಿಸಿದ್ದಾರೆ. “ರೈತರ ನೋವನ್ನು ಆಲಿಸಬೇಕಾದ ಅಧಿಕಾರಿಗಳು ಬದಲಿಗೆ ಎಫ್‌ಐಆರ್ ದಾಖಲಿಸಿದ್ದಾರೆ. ಇದು ನಿಜಕ್ಕೂ ದುರಂತ,” ಎಂದು ಆಕ್ರೋಶ ವ್ಯಕ್ತಪಡಿಸಿದರು.