Chandrayaan-3: DCM DK Shivakumar visited ISRO and congratulated scientists
ಬೆಂಗಳೂರು:
ಚಂದ್ರಯಾನ 3 ಯೋಜನೆ ಯಶಸ್ವಿ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಸ್ರೋ ಸಂಸ್ಥೆಗೆ ಬುಧವಾರ ಸಂಜೆ ಭೇಟಿ ನೀಡಿ ಸಂಸ್ಥೆ ಮುಖ್ಯಸ್ಥ ಎಸ್. ಸೋಮನಾಥ್ ಹಾಗೂ ಅವರ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಇಸ್ರೋ ಅಧ್ಯಕ್ಷ ಸೋಮನಾಥ್, ಯು ಆರ್ ರಾವ್ ಬಾಹ್ಯಕಾಶ ಕೇಂದ್ರದ ನಿರ್ದೇಶಕ ಶಂಕರನ್, ಯೋಜನೆ ನಿರ್ದೇಶಕ ವೀರಮುತ್ತು, ಸಹಾಯಕ ಯೋಜನೆ ನಿರ್ದೇಶಕಿ ಕಲ್ಪನಾ, ಯಂತ್ರ ನಿರ್ವಹಣೆ ನಿರ್ದೇಶಕ ಶ್ರೀಕಾಂತ್ ಮತ್ತಿತರ ವಿಜ್ಞಾನಿಗಳನ್ನು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಪುಷ್ಪಮಾಲೆ ಹಾಕಿ ಡಿ ಕೆ ಶಿವಕುಮಾರ್ ಅವರು ತುಂಬು ಹೃದಯದಿಂದ ಅಭಿನಂದಿಸಿದರು.
ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿದ ನಿಮ್ಮ ಸಾಧನೆ ಶ್ಲಾಘನೀಯ. ನೀವು ಭಾರತದ ಹೆಮ್ಮೆ ಎಂದು ಡಿ ಕೆ ಶಿವಕುಮಾರ್ ಕೊಂಡಾಡಿದರು.
ಚಂದ್ರಯಾನ ಯೋಜನೆ ಬಗ್ಗೆ ಸಂಕ್ಷಿಪ್ತ ವಿವರ ಪಡೆದ ಶಿವಕುಮಾರ್ ಅವರು ವಿಜ್ಞಾನಿಗಳ ಸಾರ್ಥಕ ಸಂತಸದ ಕ್ಷಣಗಳಿಗೆ ಸಾಕ್ಷಿಯಾದರು.

ಇಡೀ ದೇಶವೇ ನಿರೀಕ್ಷೆ ಹೊಂದಿದ್ದ ಚಂದ್ರಯಾನ 3 ಯೋಜನೆ ಯಶಸ್ವಿಯಾಗಿರುವ ಈ ಸಂದರ್ಭದಲ್ಲಿ ಯೋಜನೆಗಾಗಿ ಶ್ರಮಿಸಿದ ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳ ಶ್ರಮ ಅವಿಸ್ಮರಣೀಯ ಎಂದರು.
ಡಿಸಿಎಂ ಶುಭ ಸಂದೇಶ:
“ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಕಾಲಿಟ್ಟಿದೆ. ಆ ಮೂಲಕ ಚಂದ್ರಗ್ರಹದ ಮೇಲೆ ಭಾರತದ ಹೆಗ್ಗುರುತು ಮೂಡಿದೆ. ಇದಕ್ಕಾಗಿ ಅವಿರತ ಶ್ರಮಿಸಿದ ಇಸ್ರೋ ಸಂಸ್ಥೆಗೆ ಶುಭಾಶಯಗಳು.
ಇಸ್ರೋ ಸಂಸ್ಥೆ ಈವರೆಗೂ ಮೂರು ಚಂದ್ರಯಾನ ಯೋಜನೆ ಯಶಸ್ವಿಗೊಳಿಸಿರುವುದು ದೊಡ್ಡ ಸಾಧನೆಯೇ ಸರಿ.
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿರುವುದು ಇಡೀ ದೇಶವೇ ಹೆಮ್ಮೆಪಡುವ ವಿಚಾರ. ಈ ಯೋಜನೆ ಯಶಸ್ಸಿನ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಎಂದು ಶಿವಕುಮಾರ್ ಅವರು ಕೊಂಡಾಡಿದ್ದಾರೆ.
1960ರ ದಶಕದಲ್ಲೇ ದೇಶದ ರಾಕೆಟ್ ಮ್ಯಾನ್ ವಿಕ್ರಂ ಸಾರಾಭಾಯಿ, ಮಾಜಿ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಅವರ ದೂರದೃಷ್ಟಿ ಇಸ್ರೋ ಸಂಸ್ಥೆಗೆ ಬುನಾದಿ ಹಾಕಿತ್ತು. ಅಂದು ಅವರು ಬಿತ್ತಿದ ಬೀಜ ಇದು ವಿಶ್ವದಲ್ಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದಿದೆ” ಎಂದು ಶಿವಕುಮಾರ್ ಅವರು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.
