ಬೆಂಗಳೂರು:
ಚಂದ್ರನ ಅಂಗಳದ ಮೇಲೆ ಇಸ್ರೋ ನೌಕೆ ಇಳಿಯುವ ಮೂಲಕ ದೇಶನ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳ ಪರಿಶ್ರಮ-ಸಾಧನೆ ಕಂಡು ಭಾವುಕರಾಗಿದ್ದಾರೆ.
ಚಂದ್ರಯಾನ-3 ಯಶಸ್ಸಿನ ಕುರಿತು ಇಸ್ರೋ ವಿಜ್ಞಾನಿಗಳ ಅಭಿನಂದಿಸಲು ಬೆಂಗಳೂರಿನ ಇಸ್ರೋ ಕಚೇರಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಅಭಿನಂದಿಸಿದರು. ಈ ವೇಳೆ ಇಸ್ರೋ ವಿಜ್ಞಾನಿಗಳ ಕುರಿತು ಪ್ರಧಾನಿ ಮೋದಿ ಮಾತನಾಡಿದ ಪ್ರಧಾನಿ ಮೋದಿ, ಇಸ್ರೋ ಯಶಸ್ಸಿಗೆ ನಾನು ಸಂಪೂರ್ಣ ಖುಷಿಯಾಗಿದ್ದೇನೆ.
ಇಸ್ರೋ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಚಂದ್ರಯಾನ 3 ಯಶಸ್ಸು ಅತ್ಯಂತ ಮಹತ್ವದ ಸಾಧನೆಯಾಗಿದ್ದು, ನಿಮ್ಮನ್ನು ಭೇಟಿಯಾಗಿದ್ದು ನನಗೆ ಸಂತೋಷ ತಂದಿದೆ ಎಂದು ಹೇಳಿದರು.
ಇದೇ ವೇಳೆ ಇಸ್ರೋ ವಿಜ್ಞಾನಿಗಳ ಪರಿಶ್ರಮ ಮತ್ತು ಸಾಧನೆ ಕುರಿತು ಮಾತನಾಡುವಾಗ ಪ್ರಧಾನಿ ಮೋದಿ ಭಾವುಕರಾದರು. ಯಾವ ದೇಶವು ಮಾಡದ ಸಾಧನೆಯನ್ನ ನಾವು ಮಾಡಿದ್ದೇವೆ. ಪ್ರತಿಯೊಬ್ಬ ವಿಜ್ಞಾನಿಗೂ ನನ್ನಿಂದ ಸೆಲ್ಯೂಟ್ ಹೇಳುತ್ತೇನೆ. ಯಾವ ದೇಶವೂ ಮಾಡಿರದ ಸಾಧನೆಯನ್ನ ನಾವು ಮಾಡಿದ್ದೇವೆ. ಸದ್ಯ ಭಾರತ ಚಂದ್ರನ ಮೇಲಿದೆ. ನನ್ನ ತನು-ಮನ ತುಂಬಿ ತುಳುಕುತ್ತಿದೆ. ನಮ್ಮ ದೇಶದ ಘನತೆಯನ್ನ ಉನ್ನತ ಮಟ್ಟಕ್ಕೆ ತೆಗೆದುಕೊಂಡೊಯ್ದಿದ್ದೀರಿ ನಿಮ್ಮೆಲ್ಲರಿಗೂ ನನ್ನದೊಂದು ದೊಡ್ಡ ಸೆಲ್ಯೂಟ್ ಎಂದು ಮೋದಿ ಭಾವುಕರಾಗಿ ಹೇಳಿದರು.
ನಿಮ್ಮ ಸಾಧನೆಯನ್ನು ಎಷ್ಟೇ ಕೊಂಡಾಡಿದರೂ ಅದು ಕಡಿಮೆಯೇ. ಚಂದ್ರನ ಮೇಲೆ ಪ್ರಜ್ಞಾನ್ ಪರಾಕ್ರಮ ಕಂಡು ಖುಷಿಯಾಗಿದೆ. ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ. ನಿಮ್ಮೆಲ್ಲರ ಈ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ. ನೀವೆಲ್ಲರೂ ಸೇರಿ ಭಾರತದ ಕನಸನ್ನು ನನಸು ಮಾಡಿದ್ದೀರಿ. ನಾನು ವಿದೇಶದಲ್ಲಿದ್ದೆ, ಆದರೆ ನನ್ನ ಹೃದಯವು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ನಿಮ್ಮೊಂದಿಗೆ ಇತ್ತು ಎಂದು ಮೋದಿ ಹೇಳಿದರು.