ನವದೆಹಲಿ: ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್ ಶೃಂಗಸಭೆ 2025ಕ್ಕೆ ಪೂರ್ವಭಾವಿಯಾಗಿ ‘ಬ್ರಿಡ್ಜ್ ಟು ಬೆಂಗಳೂರು’ ಕಾರ್ಯಕ್ರಮವನ್ನು ನವದೆಹಲಿ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಗತ್ತಿನ ಡಿಪ್ಲೋಮೆಟ್‌ಗಳು, ತಂತ್ರಜ್ಞರು ಮತ್ತು ಉದ್ಯಮಿಗಳಿಗೆ ಕರ್ನಾಟಕದೊಂದಿಗೆ ಸುದೀರ್ಘ ಸಹಕಾರಕ್ಕಾಗಿ ಆಹ್ವಾನ ನೀಡಿದರು.
ಇತ್ತೀಚೆಗೆ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಯೋಟೆಕ್ ಇಲಾಖೆ ಆಯೋಜಿಸಿದ ಈ ಕಾರ್ಯಕ್ರಮ, ಗ್ಲೋಬಲ್ ಇನೋವೆಷನ್ ಅಲಯನ್ಸ್ ಹೆಸರಿನಲ್ಲಿ ಜಾಗತಿಕ ಸಂಬಂಧಗಳನ್ನು ಗಟ್ಟಿಮಾಡುವ ಉದ್ದೇಶ ಹೊಂದಿದ್ದು, ಟೆಕ್ ಶೃಂಗಸಭೆಗೆ ವೇದಿಕೆ ಸಿದ್ಧಪಡಿಸಿದೆ.
“ಪಾರಂಪರ್ಯ ಮತ್ತು ಪ್ರಗತಿಯ ಸಂಗಮ ಸ್ಥಳವಾಗಿರುವ ಕರ್ನಾಟಕ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವುದರ ಜೊತೆಗೆ ತಾಂತ್ರಿಕವಾಗಿ ಭಾರತವನ್ನು ಮುನ್ನಡೆಸುತ್ತಿದೆ. ಪ್ರವಾಸೋದ್ಯಮದಿಂದ ಹಿಡಿದು ಕ್ಲೀನ್ ಎನರ್ಜಿ, ಸ್ಮಾರ್ಟ್ ಸಿಟಿಗಳವರೆಗೆ ಜಾಗತಿಕ ಸಹಕಾರಕ್ಕೆ ನಾವು ತೆರೆದಿದ್ದೇವೆ,” ಎಂದು ಸಿದ್ಧರಾಮಯ್ಯ ಹೇಳಿದರು.
2025 ರ ನವೆಂಬರ್ 18 ರಿಂದ 20 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್ನಲ್ಲಿ ನಮ್ಮ ಈ ಯೋಜನೆಗಳಿಗೆ ಶಕ್ತಿ ತುಂಬಲಿವೆ. ಭವಿಷ್ಯೀಕರಿಸುವ(Futurise) ಎಂಬ ವಿಷಯವನ್ನು ಆಧರಿಸಿದ ಸಮಿಟ್ ನಲ್ಲಿ, ಕೃತಕ ವಿಜ್ಞಾನ, ಸೆಮಿಕಂಡಕ್ಟರ್ಸ್, ಆರೋಗ್ಯ ಹಾಗೂ ಹವಾಮಾನ ತಂತ್ರಜ್ಞಾನಗಳಲ್ಲಿ… pic.twitter.com/esSmp5eMSQ
— CM of Karnataka (@CMofKarnataka) August 1, 2025
ಕರ್ನಾಟಕದ ಆರ್ಥಿಕತೆ $337 ಬಿಲಿಯನ್ ಆಗಿದ್ದು, ರಾಜ್ಯವು ಭಾರತದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಬೆಂಗಳೂರು ನಗರದಲ್ಲೇ 18,000ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹಾಗೂ 50 ಯುನಿಕಾರ್ನ್‌ಗಳಿವೆ ಎಂದು ಅವರು ವಿವರಿಸಿದರು.
“ನಾವು ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡದಂತಹ ನಗರಗಳಲ್ಲಿಯೂ ಅಭಿವೃದ್ಧಿಯನ್ನು ವಿಸ್ತರಿಸುತ್ತಿರುವ ‘ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮದ ಮೂಲಕ ಸಮತೋಲನದ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿದ್ದೇವೆ,” ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರು ‘ನಿಪುಣ ಕರ್ನಾಟಕ’ ಯೋಜನೆಯ ಮೂಲಕ ಏಐ, ಸೈಬರ್‌ಸಿಕ್ಯುರಿಟಿ, ಬಯೋಟೆಕ್ ಕ್ಷೇತ್ರಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ಟೆಕ್ ಶೃಂಗಸಭೆ 2025ನ್ನು ನವೆಂಬರ್ 18ರಿಂದ 20ರ ವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದು, 60 ದೇಶಗಳಿಂದ 600ಕ್ಕೂ ಹೆಚ್ಚು ಸ್ಪೀಕರ್‌ಗಳು, 1,200 ಪ್ರದರ್ಶಕರು, 1 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರನ್ನು ನಿರೀಕ್ಷಿಸಲಾಗಿದೆ.
“ಗ್ಲೋಬಲ್ ಇನೋವೆಷನ್ ಅಲಯನ್ಸ್ ಟ್ರ್ಯಾಕ್ ಮೂಲಕ ನಿಮ್ಮ ದೇಶಗಳು ತಾಂತ್ರಿಕತೆ ಪ್ರದರ್ಶಿಸಲು, ವ್ಯಾಪಾರ ಸಭೆಗಳನ್ನು ನಡೆಸಲು ಮತ್ತು ನೀತಿನಿರ್ಣಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ನಾವು ನಿಮ್ಮನ್ನು ಅತಿಥಿಗಳಾಗಿ ಮಾತ್ರವಲ್ಲ, ಭವಿಷ್ಯ ನಿರ್ಮಾಣದ ಸಹಯೋಗಿಗಳಾಗಿ ಆಹ್ವಾನಿಸುತ್ತೇವೆ,” ಎಂದು ಅವರು ಹೇಳಿದರು.
“ಪ್ರವಾಸೋದ್ಯಮ, ತಂತ್ರಜ್ಞಾನ ಅಥವಾ ಪ್ರತಿಭೆಗಳ ಮೂಲಕ — ಕರ್ನಾಟಕ ಜಾಗತಿಕ ಸಹಕಾರಕ್ಕೆ ತೆರೆದಿದೆ. ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ನೀವು ಪಾಲ್ಗೊಳ್ಳಿ, ಹೊಸ ಸಹಕಾರದ ಸೇತುವೆಗಳನ್ನು ನಿರ್ಮಿಸೋಣ,” ಎಂದು ಸಿದ್ಧರಾಮಯ್ಯ ಸಮಾರೋಪಿಸಿದರು.