ಬೆಂಗಳೂರು: ರಾಜ್ಯಾದ್ಯಂತ ಶಾಂತ, ಸುರಕ್ಷಿತ ಮತ್ತು ಸುವ್ಯವಸ್ಥಿತ ಹೊಸ ವರ್ಷಾಚರಣೆ ನಡೆಯುವಂತೆ ನೋಡಿಕೊಂಡ ಕರ್ನಾಟಕ ಪೊಲೀಸರ ಶಿಸ್ತು, ಸಮರ್ಪಣೆ ಮತ್ತು ಅವಿಶ್ರಾಂತ ಶ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ
ಹೊಸ ವರ್ಷದ ಹಿನ್ನೆಲೆಯಲ್ಲಿ X (ಟ್ವಿಟರ್)ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಖ್ಯಮಂತ್ರಿ, ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಸಾರ್ವಜನಿಕ ಸುರಕ್ಷತೆ ಕಾಪಾಡಿದ ಪೊಲೀಸರ ವೃತ್ತಿಪರತೆ ಪ್ರಶಂಸನೀಯ ಎಂದು ಹೇಳಿದ್ದಾರೆ.

“ಕರ್ನಾಟಕ ಹೊಸ ವರ್ಷವನ್ನು ಸ್ವಾಗತಿಸಿದ ಸಂದರ್ಭದಲ್ಲಿ, ಶಾಂತ ಹಾಗೂ ಸುರಕ್ಷಿತ ಆಚರಣೆಗೆ ಕಾರಣರಾದ ನಮ್ಮ ಕರ್ನಾಟಕ ಪೊಲೀಸರ ಸಮರ್ಪಣೆ ಮತ್ತು ಶಿಸ್ತನ್ನು ಹೃದಯಪೂರ್ವಕವಾಗಿ ಶ್ಲಾಘಿಸುತ್ತೇನೆ,” ಎಂದು ಸಿಎಂ ಹೇಳಿದ್ದಾರೆ.
ಪೊಲೀಸರ ಸಾರ್ವಜನಿಕ ಸುರಕ್ಷತೆಯತ್ತ ಇರುವ ಬದ್ಧತೆ ನೈಜ ಸೇವಾ ಮನೋಭಾವದ ದ್ಯೋತಕವಾಗಿದ್ದು, ಜನಸಂದಣಿ ನಡುವೆಯೂ ಶಾಂತಿ ಕಾಪಾಡಿದ ಕ್ರಮ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ವರ್ಷಾಚರಣೆಯ ದಿನ ಕರ್ತವ್ಯ ನಿರ್ವಹಿಸಿದ ಪ್ರತಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸಿರುವ ಮುಖ್ಯಮಂತ್ರಿ,
2026ನೇ ವರ್ಷವು ಎಲ್ಲ ಕನ್ನಡಿಗರಿಗೂ ಸುಖ, ಸಂತಸ ಮತ್ತು ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.
