ಬೆಂಗಳೂರು: ಬೆಂಗಳೂರು ಈಸ್ಟ್ ಕಾರ್ಪೊರೇಷನ್ ಮಹದೇವಪುರ ವಲಯದ ಚಿಕ್ಕಬೆಳ್ಳಂದೂರು ಕೆರೆ ಭಾಗದಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯ ಮೂಲಕ 3 ಗುಂಟೆ ಕೆರೆ ಜಾಗವನ್ನು ವಶಪಡಿಸಿಕೊಂಡಿದೆ.
ಚಿಕ್ಕಬೆಳ್ಳಂದೂರು ಗ್ರಾಮದ ಸರ್ವೆ ಸಂಖ್ಯೆ 9ರಲ್ಲಿ ಇರುವ ಕೆರೆಯ ಒಟ್ಟು ವಿಸ್ತೀರ್ಣ 67 ಎಕರೆ 14 ಗುಂಟೆ ಆಗಿದ್ದು, ಅದರಲ್ಲಿ ಸುಮಾರು 3 ಗುಂಟೆ ಜಾಗ ಖಾಸಗಿಯವರಿಂದ ಒತ್ತುವರಿಯಾಗಿತ್ತು. ಕಂದಾಯ ಇಲಾಖೆ ಸರ್ವೆ ನಡೆಸಿ ಒತ್ತುವರಿ ಪ್ರದೇಶವನ್ನು ಗುರುತಿಸಿ ನಕ್ಷೆಯನ್ನು ಕಾರ್ಪೊರೇಷನ್ಗೆ ಹಸ್ತಾಂತರಿಸಿತ್ತು. ನೋಟಿಸ್ ನೀಡಿದ್ದರೂ ಖಾಸಗಿಯವರು ತೆರವುಗೊಳಿಸದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಯಿತು.
ಆಯುಕ್ತ ಡಿ.ಎಸ್. ರಮೇಶ್ ಹಾಗೂ ಅಪರ ಆಯುಕ್ತ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ನಿರ್ದೇಶನದಂತೆ ಮಹದೇವಪುರ ವಲಯ-1 ಮುಖ್ಯ ಅಭಿಯಂತರರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 3 ಗುಂಟೆ ಜಾಗವನ್ನು ತೆರವುಗೊಳಿಸಿ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಜಾಗಕ್ಕೆ ತಂತಿ ಬೇಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕಾರ್ಯಪಾಲಕ ಅಭಿಯಂತರರು (ಮಹದೇವಪುರ ವಿಭಾಗ), ಸಹಾಯಕ ಅಭಿಯಂತರರು (ವರ್ತೂರು ಉಪವಿಭಾಗ), ಕಾರ್ಯಪಾಲಕ ಅಭಿಯಂತರರು (ಕೆರೆಗಳು–ಮಹದೇವಪುರ), ಸಹಾಯಕ ಕಾರ್ಯಪಾಲಕ ಅಭಿಯಂತರರು (ಕೆರೆಗಳು–ಮಹದೇವಪುರ) ಸೇರಿದಂತೆ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದರು.
ಅಧಿಕಾರಿಗಳು, ಕೆರೆ ಸಂರಕ್ಷಣೆ, ಒತ್ತುವರಿ ನಿವಾರಣೆ ಮತ್ತು ಬೆಂಗಳೂರು ನೀರಿನ ಸಂಪನ್ಮೂಲಗಳ ರಕ್ಷಣೆಯತ್ತ ಕಾರ್ಪೊರೇಷನ್ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
