ತುಮಕೂರು : ಅವಿವಾಹಿತ ಹಾಗೂ ಅಕ್ರಮ ಸಂಬಂಧದಿಂದ ಗರ್ಭಧರಿಸಿದ ಮಹಿಳೆಯರನ್ನು ಪತ್ತೆಹಚ್ಚಿ ಅವರು ಜನ್ಮನೀಡುವ ಮಕ್ಕಳನ್ನು ಪಡೆದುಕೊಂಡು ಮಕ್ಕಳಿಲ್ಲದ ದಂಪತಿಗಳಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಗುಬ್ಬಿ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿ, 5 ಮಕ್ಕಳನ್ನು ರಕ್ಷಿಸಿರುವುದಾಗಿ ವರದಿಯಾಗಿದೆ.
ಬಂಧಿತ ಆರೋಪಿಗಳನ್ನು ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿರುವ ತುಮಕೂರಿನ ಅಶೋಕ ನಗರದ ಮಹೇಶ್.ಯು.ಡಿ.(39), ಹುಳಿಯಾರಿನ ನಿವಾಸಿ ಫಾರ್ಮಸಿಸ್ಟ್ ಮೆಹಬೂಬ್ ಷರೀಫ್(52), ಜಾತ್ರೆಗಳಲ್ಲಿ ಟ್ಯಾಟೂ ಬರೆಯುತ್ತಿದ್ದ ಗುಬ್ಬಿ ತಾಲೂಕು ಬಿಕ್ಕೇಗುಡ್ಡ ಗ್ರಾಮದ ಕೆ.ಎನ್.ರಾಮಕೃಷ್ಣ (53), ತುಮಕೂರಿನ ಭಾರತಿ ನಗರದ ನಿವಾಸಿ ಹನುಮಂತರಾಜು (45), ಮಂಡ್ಯ ಬೆಳ್ಳೂರಿನ ಮುಬಾರಕ್ ಪಾಷ(44), ಮಧುಗಿರಿ ತಾಲೂಕು ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಆಗಿದ್ದ ಪೂರ್ಣಿಮಾ.ಎನ್ (39) ಹಾಗೂ ಸೌಜನ್ಯ (48) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, 50 ಸಾವಿರ ರೂ. ನಗದು ಹಾಗೂ 4 ಮೊಬೈಲ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಜೂನ್ 6 ರಂದು ರಾತ್ರಿ ಗುಬ್ಬಿ ಪಟ್ಟಣದ ಚನ್ನಬಸವೇಶ್ವರ ದೇವಾಲಯದ ಬಳಿ ಮಹಾದೇವಿ ಎಂಬವರು ತನ್ನ ಕುಟುಂಬದೊಂದಿಗೆ ಮಲಗಿದ್ದಾಗ ಇವರ 11 ತಿಂಗಳ ರಾಕಿ ಎಂಬ ಗಂಡು ಮಗುವನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಈ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಕರಣ ಸಂಬಂಧ ಕಾರ್ಯಪ್ರವೃತ್ತರಾದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಮಗುವನ್ನು ಕಳ್ಳತನ ಮಾಡಿದ್ದ ಗುಬ್ಬಿ ತಾಲೂಕು ಬಿಕ್ಕೇಗುಡ್ಡ ನಿವಾಸಿ ರಾಮಕೃಷ್ಣ ಹಾಗೂ ತುಮಕೂರಿನ ಭಾರತಿ ನಗರದ ನಿವಾಸಿ ಹನುಮಂತರಾಜು ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಅವರು ನೀಡಿದ ಮಾಹಿತಿ ಮೇರೆಗೆ ಆರೋಪಿ ಮಹೇಶ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ 1.75 ಲಕ್ಷ ರೂ.ಗಳಿಗೆ ಮಗುವನ್ನು ಬೆಳ್ಳೂರು ಕ್ರಾಸ್ ಮುಬಾರಕ್ ಎಂಬುವರಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿತು ಎಂದು ಅವರು ವಿವರಿಸಿದರು.
ಆರೋಪಿಗಳು ಮಕ್ಕಳನ್ನು 2 ರಿಂದ 3 ಲಕ್ಷ ರೂ.ವರೆಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬಹಿರಂಗ ಗೊಂಡಿದೆ. ಆರೋಪಿಗಳಿಂದ ಮಕ್ಕಳನ್ನು ಹಣ ಕೊಟ್ಟು ಖರೀದಿಸಿರವವರನ್ನು ಸಹ ವಶಕ್ಕೆ ಪಡೆಯಲಾಗಿದೆ. ಈ ಕೃತ್ಯಕ್ಕೆ ಸಹಕರಿಸಿರುವ ಬಂಧಿತ ಆರೋಪಿ ಮೆಹಬೂಬ್ ಷರೀಫ್ ಹುಳಿಯಾರಿನಲ್ಲಿ ತನ್ನ ಪತ್ನಿಯ ಹೆಸರಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ವಿ. ಮರಿಯಪ್ಪ, ಡಿವೈಎಸ್ಪಿಗಳಾದ ರಾಮಚಂದ್ರ, ಬಿ.ಕೆ. ಶೇಖರ್, ಚಂದ್ರಶೇಖರ್ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.