ಬೆಂಗಳೂರು:
ಶಾಲೆಗಳು ಪ್ರಾರಂಭವಾಗಿರುವುದರಿಂದ ಮಕ್ಕಳಿಗೆ ನಿಜವಾದ ಸ್ವಾತಂತ್ರ್ಯ ದೊರೆತಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯ ಪಟ್ಟರು.
ಕೋವಿಡ್ 19 ರ ನಂತರ ಶಾಲೆಗಳು ಆರಂಭಗೊಂಡ ಪ್ರಥಮ ದಿನವಾದ ಇಂದು ಮಲ್ಲೇಶ್ವರಂ 18 ನೆ ಕ್ರಾಸ್ ನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಕೋವಿಡ್ 1 ಮತ್ತು 2 ನೇ ಅಲೆಯಲ್ಲಿ ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದೆ. ಶಿಕ್ಷಣದಲ್ಲಿ ಹಲವಾರು ಪ್ರಯೋಗಗಳಾಗಿದ್ದು,
ಆನ್ ಲೈನ್ ಹಾಗೂ ಶಾಲಾ ಆವರಣದಲ್ಲಿ ಶಿಕ್ಷಣ ಕೊಡಲು ಪ್ರಯತ್ನಗಳು ನಡೆದಿವೆ. ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಪ್ರಯತ್ನ ಮಾಡಲಾಗಿದೆ ಎಂದ ಮುಖ್ಯಮಂತ್ರಿಗಳು, ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ. ಮಕ್ಕಳಿಗೆ ತೊಂದರೆಯಾಗದಂತೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ತಜ್ಞರ ಸಮಿತಿ ವರದಿಯಾಧಾರದಲ್ಲಿ 15 ದಿನಗಳ ಹಿಂದೆಯೇ ಶಾಲೆಗಳನ್ನು ತೆರೆಯುವ ಬಗ್ಗೆ ಘೋಷಣೆ ಮಾಡಲಾಗಿತ್ತು.ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಸಚಿವರೂ ಸಹ ಶಾಲೆ ತೆರೆಯಲು ಪೂರ್ವ ಸಿದ್ಧತೆಗೆ ನಿರಂತರವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಇಂದು ಇಲ್ಲಿನ ಪ್ರಾಂಶುಪಾಲರು , ವಿದ್ಯಾರ್ಥಿಗಳ ಜೊತೆಗೆ ಮಾತನಾಡಿದ್ದೇನೆ. ಈ ಬಗ್ಗೆ ಶಿಕ್ಷಕರು , ಪ್ರಾಂಶುಪಾಲರು ಸಂತೋಷವಾಗಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಭಾವನಾತ್ಮಕ ಸಂಬಂಧ ಬೆಸೆಯಲು ಇದು ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಬೆರೆಯಲು ಸಾಧ್ಯವಾಗಿದೆ ಎಂದು ಮಕ್ಕಳು ಅಭಿಪ್ರಾಯಪಟ್ಟಿದ್ದಾರೆ. ಕಲಿಕೆ ಜ್ಞಾನ ಸಂಪಾದನೆಯ ಮಾರ್ಗ. ಮುಕ್ತ ವಾತಾವರಣ ನಿರ್ಮಾಣ ಮಾಡಿದರೆ ಮಾತ್ರ ಜ್ಞಾನ ಸಂಪಾದನೆ ಸಾಧ್ಯವಾಗುತ್ತದೆ. ಮಕ್ಕಳು ಓದಬೇಕು ಎಂದು ಕಿವಿ ಮಾತು ಹೇಳಿದ್ದೇನಲ್ಲದೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸ್ ಮಾಡುವುದನ್ನು ಪಾಲಿಸಬೇಕು ಎಂದು ತಿಳಿಸಿದ್ದೇನೆ ಎಂದರು.
ಗಡಿ ಜಿಲ್ಲೆಗಳಲ್ಲಿ ಶಾಲೆಗಳ ಪ್ರಾರಂಭ: ಗಡಿ ಜಿಲ್ಲೆಗಳಲ್ಲಿ ಕೋವಿಡ್ 19 ರ ಪ್ರಮಾಣ ಶೇ 2% ಕ್ಕಿಂತ ಕಡಿಮೆಯಾದಾಗ ಅಲ್ಲಿಯೂ ಶಾಲೆಗಳನ್ನು ಹಂತ ಹಂತವಾಗಿ ಪ್ರಾರಂಭ ಮಾಡಲಾಗುವುದು.
ಪ್ರಾಥಮಿಕ ಶಾಲೆಗಳ ಪ್ರಾರಂಭದ ಬಗ್ಗೆ ತಜ್ಞರ ಸಮಿಯ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮುಖ್ಯಮಂತ್ರಿ @BSBommai ರವರು ಇಂದು ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ, ಭೌತಿಕ ತರಗತಿಗಳ ಪ್ರಾರಂಭಕ್ಕೆ ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು.
— CM of Karnataka (@CMofKarnataka) August 23, 2021
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ @BCNagesh_bjp, ಉನ್ನತ ಶಿಕ್ಷಣ ಸಚಿವ @drashwathcn ಉಪಸ್ಥಿತರಿದ್ದರು.#ಮರಳಿಶಾಲೆಗೆ pic.twitter.com/zHbBSwtLUV
ನಿರ್ಮಲ ರಾಣಿ ಶಾಲೆಗೆ ಭೇಟಿ: ಮಲ್ಲೇಶ್ವರಂ ನ ನಿರ್ಮಲ ರಾಣಿ ಶಾಲೆಗೆ ಭೇಟಿ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು ಸರ್ಕಾರ ಶಾಲೆಗಳ ಪ್ರಾರಂಭಕ್ಕೆ ಗಟ್ಟಿ ನಿರ್ಧಾರ ಕೈಗೊಂಡಿತು.ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ವಿಶೇಷ ಕಾಳಜಿ ಇದೆ ಎಂದರು.
ಶಾಲೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆ ಜೊತೆಗೆ ಆರೋಗ್ಯ ತಪಾಸಣೆ ಮಾಡಬೇಕು. ಅಪೌಷ್ಟಿಕತೆ ಇದ್ದಲ್ಲಿ ಪೌಷ್ಟಿಕಾಂಶಗಳನ್ನು ನೀಡಲು ಕ್ರಮ ಕೈಗೊಳ್ಳಿ ಎಂದರು.
ರಾಜ್ಯದಲ್ಲಿ 9, 10ನೇ ತರಗತಿ ಹಾಗೂ ಪದವಿಪೂರ್ವ ತರಗತಿಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ @BSBommai ರವರು ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿರ್ಮಲಾರಾಣಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.#ಮರಳಿಶಾಲೆಗೆ pic.twitter.com/CpnjkSgT4Z
— CM of Karnataka (@CMofKarnataka) August 23, 2021
21ನೇ ಶತಮಾನ ಜ್ಞಾನದ ಯುಗ. ಜೀವನದ ಕೊನೆ ಉಸಿರಿರುವವರೆಗೂ ನಾವು ವಿದ್ಯಾರ್ಥಿಗಳೇ. ಕಲಿಕೆ ನಿರಂತರ ಪ್ರಕ್ರಿಯೆ. ಶಾಲೆಯಲ್ಲಿ ಕಲಿತು ಪರೀಕ್ಷೆ ಬರೆದರೆ.ಜೀವನದಲ್ಲಿ ಪರೀಕ್ಷೆಗೆ ಒಳಪಟ್ಟು ಕಲಿಯಬೇಕು. ತಾರ್ಕಿಕವಾಗಿ ಚಿಂತನೆ ಮಾಡುವುದನ್ನು ಕಲಿಯಬೇಕು ಎಂದ ಅವರು, ಯಾಕೆ, ಏನು, ಎಲ್ಲಿ, ಎಷ್ಟು ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಈ ಪ್ರಶ್ನೆಗಳು ಯಶಸ್ಸಿನ ಮಂತ್ರಗಳು. ಅದಕ್ಕೆ ಬರುವ ಉತ್ತರಗಳು ಶಾಶ್ವತವಾಗಿ ನೆನೆಪಿನಲ್ಲಿರುತ್ತವೆ. ನೀವು ನಮ್ಮ ದೇಶದ ಭವಿಷ್ಯ . ನೂತನ ಶಿಕ್ಷಣ ನೀತಿಯಿಂದ ಅವಕಾಶಗಳು ಹೆಚ್ಚಿವೆ ಎಂದರಲ್ಲದೆ ಆರೋಗ್ಯ ಕಾಪಾಡಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.