ಯಾದಗಿರಿ (ಶಹಾಪುರ): ಯಾದಗಿರಿಯ ಶಹಾಪುರ ವಸತಿ ಶಾಲೆಯಲ್ಲಿ 9ನೇ ತರಗತಿ ಬಾಲಕಿ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಿನ್ನೆ ಬೆಳಕಿಗೆ ಬಂದಿದೆ. ಈ ಘಟನೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಆಡಳಿತ ವಲಯದಲ್ಲಿ ಆತಂಕ ಹುಟ್ಟಿಸಿದೆ.
ಮಗು ಹುಟ್ಟುವ ನೋವಿನಿಂದ ಬಾಲಕಿ ಶೌಚಾಲಯದಲ್ಲಿ ಚೀರಾಡುತ್ತಿದ್ದನ್ನು ಸಹಪಾಠಿಗಳು ನೋಡಿ ಶಿಕ್ಷಕರಿಗೆ ಮಾಹಿತಿ ನೀಡಿದ್ರು. ತಕ್ಷಣ ಶಿಕ್ಷಕರು ಬಾಲಕಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಪ್ರಕರಣ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನ ಸೆಳೆದಿದ್ದು, ಆಯೋಗ ಸಂಜೆಗೊಳಗೆ ವಿಸ್ತೃತ ವರದಿ ಸಲ್ಲಿಸಲು ಸೂಚಿಸಿದೆ. ಬಾಲಕಿಯ ಆರೋಗ್ಯದಲ್ಲಿ ಬದಲಾವಣೆ ಕಂಡರೂ ವೈದ್ಯಕೀಯ ಪರೀಕ್ಷೆ ನಡೆಸದ ವಾರ್ಡನ್ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಆಯೋಗ ತೀವ್ರವಾಗಿ ಎತ್ತಿ ಹಿಡಿದಿದೆ.
ಘಟನೆಯ ನಂತರ ಯಾದಗಿರಿ ಡಿಸಿ ಹರ್ಷಲ್ ಮತ್ತು ಎಸ್‌ಪಿ ಪೃಥ್ವಿಕ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ವಿಷಯ ಮುಚ್ಚಿಹಾಕಲು ಯತ್ನಿಸಿದ್ದ ಕಾರಣ ಪ್ರಾಂಶುಪಾಲರು, ವಾರ್ಡನ್ ಹಾಗೂ ನರ್ಸ್ ಅಮಾನತುಗೊಂಡಿದ್ದಾರೆ. ಬಾಲಕಿಯ ಸಹೋದರನ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಧಿಕಾರಿಗಳು ಆರೋಪಿಗಳ ವಿರುದ್ಧ FIR, ಸಸ್ಪೆನ್ಷನ್ ಮತ್ತು ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು, ಪೊಲೀಸರ ತನಿಖೆ ಮುಂದುವರೆದಿದೆ.
ವಸತಿ ಶಾಲೆಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆ, ವೈದ್ಯಕೀಯ ಪರಿಶೀಲನೆ ಮತ್ತು ಶಾಲಾ ಆಡಳಿತದ ಜವಾಬ್ದಾರಿಯ ಬಗ್ಗೆ ಈ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ.