ಬೆಂಗಳೂರು: 2026ರ ಹೊಸ ವರ್ಷಾಚರಣೆಯ ನಂತರ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಕೇವಲ ಐದು ಗಂಟೆಗಳ ಅವಧಿಯಲ್ಲಿ ಸುಮಾರು 9 ಟನ್ ತ್ಯಾಜ್ಯವನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪಾಲಿಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಬ್ಯಾರಿಕೇಡ್ಗಳ ಅಳವಡಿಕೆ, ಅಗತ್ಯ ಸಂಖ್ಯೆಯ ಸ್ವಚ್ಛತಾ ಸಿಬ್ಬಂದಿಗಳ ನಿಯೋಜನೆ, ವೈದ್ಯಕೀಯ ನೆರವಿಗಾಗಿ ಆಂಬುಲೆನ್ಸ್ ಸಹಿತ ವೈದ್ಯರ ತಂಡ, ನಿರಂತರ ವಿದ್ಯುತ್ ಪೂರೈಕೆ ಹಾಗೂ ಇಂಜಿನಿಯರ್ಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿತ್ತು.
ನಸುಕಿನಜಾವ 3.00 ಗಂಟೆಯಿಂದ ಬೆಳಿಗ್ಗೆ 8.00 ಗಂಟೆಯವರೆಗೆ ನಡೆದ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಸೆಂಟ್ ಮಾರ್ಕ್ ರಸ್ತೆ, ರೆಸಿಡೆನ್ಸಿ ರಸ್ತೆ ಹಾಗೂ ಇಂದಿರಾನಗರ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು.



ಈ ವೇಳೆ ಮದ್ಯದ ಬಾಟಲಿ, ಚಪ್ಪಲಿ, ಶೂಗಳು, ಬಟ್ಟೆಗಳು, ಊಟ–ತಿಂಡಿ ಪ್ಲೇಟ್ಗಳು, ಪ್ಲಾಸ್ಟಿಕ್ ತ್ಯಾಜ್ಯ, ಸಿಗರೇಟ್ ಕಸ ಹಾಗೂ ಇತರೆ ತ್ಯಾಜ್ಯ ಸೇರಿ ಒಟ್ಟು ಸುಮಾರು 9 ಟನ್ ಕಸವನ್ನು ತೆರವುಗೊಳಿಸಲಾಗಿದೆ.
ರಾತ್ರಿ ಪೂರ್ತಿ ಕಾರ್ಯನಿರ್ವಹಿಸಿದ ಪೌರಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿಗಳು, ಆಟೋ ಟಿಪ್ಪರ್ ಚಾಲಕರು ಹಾಗೂ ಅಧಿಕಾರಿಗಳ ಕಾರ್ಯವನ್ನು ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಅವರು ಶ್ಲಾಘಿಸಿದ್ದಾರೆ.
ಸ್ವಚ್ಛತಾ ಕಾರ್ಯಾಚರಣೆಯ ಪ್ರಮುಖ ಅಂಶಗಳು:
- 110 ಪೌರಕಾರ್ಮಿಕರು ಕಾರ್ಯದಲ್ಲಿ ಭಾಗವಹಿಸಿದ್ದರು
- 3 ಕಿರಿಯ ಆರೋಗ್ಯ ಪರಿವೀಕ್ಷಕರು
- 10 ಆಟೋ ಟಿಪ್ಪರ್ ವಾಹನಗಳು
- 3 ಪ್ರೆಷರ್ ಜೆಟ್ ವಾಟರ್ ಕ್ಲೀನಿಂಗ್ ಯಂತ್ರಗಳು
- ಕಾರ್ಯಾಚರಣೆ ಅವಧಿ: ನಸುಕಿನಜಾವ 3.00 ರಿಂದ ಬೆಳಿಗ್ಗೆ 8.00ರವರೆಗೆ
ಈ ಸ್ವಚ್ಛತಾ ಕಾರ್ಯದಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಭೀಮೇಶ್ ನಾಯಕ್, ಎಜಿಎಂ ಅಪ್ಪುರಾಜ್ ಮತ್ತು ರವಿಕುಮಾರ್ ಹಾಜರಿದ್ದು, ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು.
ಹೊಸ ವರ್ಷದ ಮೊದಲ ಬೆಳಿಗ್ಗೆಯಲ್ಲೇ ಬೆಂಗಳೂರು ಸ್ವಚ್ಛವಾಗಿ ಕಾಣಲು ಕಾರಣವಾದ ಈ ಕಾರ್ಯಾಚರಣೆ, ಪೌರಕಾರ್ಮಿಕರ ಅವಿರತ ಶ್ರಮಕ್ಕೆ ಮತ್ತೊಂದು ಉದಾಹರಣೆಯಾಗಿದೆ.
