Home ರಾಜಕೀಯ ನಿಯೋಜಿತ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ: ನಾಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭ

ನಿಯೋಜಿತ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ: ನಾಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭ

43
0
Forged letter to create differences between me and DK Shivakumar: Siddaramaiah

ಬೆಂಗಳೂರು:

ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ಕಗ್ಗಂಟು ಬಗೆಹರಿದು ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ನಾಳೆ ಮೇ 20ರಂದು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಿನ್ನೆ ರಾತ್ರಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಯಿತು. ಇದಾದ ಬಳಿಕ ಈಗ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ರಚನೆ ಪ್ರಮುಖ ನಾಯಕರಿಗೆ ಪ್ರಮುಖ ಸವಾಲಾಗಿದೆ.

ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರು ಲಾಬಿ ನಡೆಸುತ್ತಿದ್ದಾರೆ. ಅವರ ಪರವಾಗಿ ಸಮುದಾಯದ ಮುಖಂಡರು, ಮಠಾಧೀಶರು ಕೂಡ ಬೇಡಿಕೆಯಿಡುತ್ತಿದ್ದಾರೆ. ಸಚಿವ ಸಂಪುಟ ರಚನೆ ಬಗ್ಗೆ ಇಂದು ಪಟ್ಟಿ ಅಂತಿಮವಾಗುವ ಸಾಧ್ಯತೆಯಿದೆ.

ಬಲ್ಲ ಮೂಲಗಳ ಪ್ರಕಾರ ಸಿಎಂ ಮತ್ತು ಡಿಸಿಎಂ ಜೊತೆ ನಾಳೆ 20 ಜನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೊದಲ ಹಂತದಲ್ಲಿ 10ರಿಂದ 15 ಅಥವಾ 20 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಎರಡನೇ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಸಚಿವ ಸ್ಥಾನ ಭರ್ತಿಗೆ ಚಿಂತನೆ ನಡೆಸಲಾಗಿದೆ.

ಸಿದ್ದರಾಮಯ್ಯ ಇಂದು ದೆಹಲಿಗೆ: ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ರಚನೆ, ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡುವ ಸದಸ್ಯರ ಹೆಸರುಗಳ ಪಟ್ಟಿಯನ್ನು ಹಿಡಿದುಕೊಂಡು ಹೈಕಮಾಂಡ್ ಜೊತೆ ಚರ್ಚಿಸಲು ದೆಹಲಿಗೆ ಇಂದು ಬೆಳಗ್ಗೆಯೇ ಹೋಗುತ್ತಿದ್ದಾರೆ.

ಹಲವು ಸಿಎಂಗಳು, ವಿರೋಧ ಪಕ್ಷದ ನಾಯಕರು ಭಾಗಿ: ಬೆಂಗಳೂರಿನಲ್ಲಿ ನಾಳೆ ಮಧ್ಯಾಹ್ನ ನಡೆಯಲಿರುವ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಮಾನ ಮನಸ್ಕ ವಿರೋಧ ಪಕ್ಷಗಳ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಲವು ಮುಖ್ಯಮಂತ್ರಿಗಳು ಮತ್ತು ಪಕ್ಷದ ಮುಖಂಡರಿಗೆ ಆಹ್ವಾನವನ್ನು ನೀಡಿದ್ದಾರೆ. ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಆಹ್ವಾನಿಸಿದ್ದಾರೆ.

ಖರ್ಗೆ ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಆಹ್ವಾನಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರಿಗೂ ಆಹ್ವಾನ ಕಳುಹಿಸಲಾಗಿದೆ.

ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ನಾಯಕ ಕೆ ಚಂದ್ರಶೇಖರ್ ರಾವ್, ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಡಿ ನಾಯಕ ನವೀನ್ ಪಟ್ನಾಯಕ್, ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ನಾಯಕ ವೈಎಸ್ ಜಗನ್ ಮೋಹನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಆಹ್ವಾನ ಕಳುಹಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರಿಗೂ ಆಹ್ವಾನವನ್ನು ಕಳುಹಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಖರ್ಗೆ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಆಹ್ವಾನ ಕಳುಹಿಸಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ದೆಹಲಿಯಲ್ಲಿರುವ ಸೋರೆನ್ ಅವರು ಮೊನ್ನೆ ಮೇ 16 ರಂದು ಖರ್ಗೆ ಅವರನ್ನು ಭೇಟಿ ಮಾಡಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದರು.

ಖರ್ಗೆ ಅವರು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರಿಗೂ ಖುದ್ದು ಕರೆ ಮಾಡಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ. ಇದೇ ರೀತಿಯ ಆಹ್ವಾನವನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರಿಗೂ ಕಳುಹಿಸಲಾಗಿದೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಯು ವಕ್ತಾರ ರಾಜೀಬ್ ರಂಜನ್ ಹೇಳಿದ್ದಾರೆ.

ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸಲಾಗಿದೆ. ಆದರೆ ಅವರು ಭಾಗವಹಿಸುತ್ತಿಲ್ಲ.

ಕಾಂಗ್ರೆಸ್ ಅಧ್ಯಕ್ಷ ಮತ್ತು ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಎಂ ಕೆ ಸ್ಟಾಲಿನ್ ಅವರಿಗೆ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಮಾನ ಮನಸ್ಕ ಪಕ್ಷದ ನಾಯಕರನ್ನು ಆಹ್ವಾನಿಸುತ್ತಿದ್ದೇವೆ ಎಂದರು.

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಆಹ್ವಾನ ನೀಡಲಾಗಿದೆ.

ಅಲ್ಲದೆ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರನ್ನೂ ಆಹ್ವಾನಿಸಲಾಗಿದ್ದು, ಅವರೆಲ್ಲ ಭಾಗವಹಿಸುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here