Home ಬೆಂಗಳೂರು ನಗರ ಜನವರಿ ಅಂತ್ಯಕ್ಕೆ 30 ಕಿ.ಮೀ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ: ಸಿಎಂ

ಜನವರಿ ಅಂತ್ಯಕ್ಕೆ 30 ಕಿ.ಮೀ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ: ಸಿಎಂ

62
0
CM instructs BBMP to complete 30km Rajakaluve works by January end bommai chairs meeting at BBMP

ಬೆಂಗಳೂರು:

30 ಕಿ.ಮೀ ರಾಜಕಾಲುವೆ ಕಾಮಗಾರಿಯನ್ನು ಜನವರಿ ಅಂತ್ಯಕ್ಕೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ನಗರದಲ್ಲಿ ಬೃಹತ್ ಕಾಲುವೆಗಳ ಕುರಿತಂತೆ ಬಿಬಿಎಂಪಿಯಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರದಲ್ಲಿ ಅತಿ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗಿದೆ. ಕೆರೆ ಕೆಳಗೆ ಇರುವ ರಾಜಕಾಲುವೆಗಳನ್ನು ದುರಸ್ತಿ ಮಾಡಿ, ಅದರ ನೀರಿನ ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎನ್ನುವ ವಿಚಾರದ ಬಗ್ಗೆ ಇಂದು ಸಭೆಯಲ್ಲಿ ಚರ್ಚಿಸಲಾಗಿದೆ. ನಗರದೊಳಗಿನ ರಾಜಕಾಲುವೆಗಳ ಕಲ್ಲಿನ ಕಟ್ಟಡಗಳನ್ನು ಆರ್.ಸಿ.ಸಿ ಕಟ್ಟಡಗಳಿಗೆ ಪರಿವರ್ತಿಸಬೇಕು. ಹೊರವಲಯದ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಕಾಲುವೆಗಳಿವೆ. 110 ಗ್ರಾಮಗಳಲ್ಲಿ ಆರ್.ಸಿ.ಸಿ ಕಾಲುವೆಗಳನ್ನು ನಿರ್ಮಿಸಿ, ಅವುಗಳ ಅಗಲ ವಿಸ್ತರಿಸಬೇಕು. ಅಲ್ಲಲ್ಲಿ ಇರುವ ಅಡಚಣೆಗಳನ್ನು ತೆಗೆಯಲು ವಿಶೇಷ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದರು.

CM instructs BBMP to complete 30km Rajakaluve works by January end bommai chairs meeting at BBMP

ಪ್ರತಿಯೊಬ್ಬ ಕಾರ್ಯನಿರ್ವಾಹಕ ಅಭಿಯಂತರರು ಅವರವರ ವ್ಯಾಪ್ತಿಗೆ ಬರುವ ವಿಚಾರಗಳಿಂದ ಮಾಹಿತಿ ಪಡೆದುಕೊಂಡು, ಕಟ್ಟುನಿಟ್ಟಿನ ಆದೇಶವನ್ನು ನೀಡಲಾಗಿದೆ. ವೃಷಭಾವತಿ, ಹೆಬ್ಬಾಳ, ಚಲ್ಲಘಟ್ಟ ಮತ್ತು ಕೋರಮಂಗಲ ನಗರದ ನಾಲ್ಕು ವ್ಯಾಲಿಗಳಿಗೆ 842 ರಾಜಕಾಲುವೆ ಇವೆ. ಈ ಪೈಕಿ 415 ಕಿ.ಮೀ ಈಗಾಗಲೇ ಪೂರ್ಣಗೊಂಡಿದೆ. 2019 -20 ರಲ್ಲಿ 75 ಕಿ.ಮೀ ರಾಜಕಾಲುವೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ಅದರಲ್ಲಿ 40 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಹಲವು ಗಂಭೀರ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಸುಮಾರು 94 ಗಂಭೀರ ಸ್ಥಳಗಳಿವೆ. ಅವುಗಳ ವಿವರಗಳನ್ನು ಪಡೆದಿದ್ದೇನೆ. ಅವುಗಳನ್ನು ಇನ್ನು 2 ತಿಂಗೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ ಎಂದರು. ಚಲ್ಲಘಟ್ಟ ಮತ್ತು ವೃಷಭಾವತಿಯಲ್ಲಿಯೂ ಇಂತಹ ಗಂಭೀರ ಸ್ಥಳಗಳಿವೆ ಎಂಬ ಮಾಹಿತಿಯನ್ನು ಪಡೆದಿದ್ದೇನೆ. ಸುಮಾರು 51 ಕಿ.ಮೀ ಪ್ರಾಥಮಿಕ ಬೃಹತ್ ನೀರುಗಾಲುವೆಗಳು ಕೂಡಲೇ ಆಗಬೇಕಿವೆ. ಉಳಿದ 38 ಕಿ.ಮೀ ದ್ವಿತೀಯ ಚರಂಡಿಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸುಮಾರು 900 ಕೋಟಿ ರೂ.ಗಳ ವೆಚ್ಚಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಚರಂಡಿಗಳ ನಿರ್ಮಾಣಕ್ಕೆ ಡಿ.ಪಿ.ಆರ್ ಸಿದ್ಧಪಡಿಸುವಂತೆ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದು, ಕೂಡಲೇ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ನಿಗದಿತ ಸಮಯದೊಳಗೆ ಪೂರ್ಣಗೊಂಡು ಜನರಿಗೆ ತೊಂದರೆಯಾಗಬಾರದು ಎನ್ನುವ ಸೂಚನೆ ನೀಡಲಾಗಿದೆ ಎಂದರು.

CM instructs BBMP to complete 30km Rajakaluve works by January end bommai chairs meeting at BBMP

ಹಲವಾರು ಬಡಾವಣೆಗಳಲ್ಲಿ ಯುಜಿಡಿ ಲೈನ್ ಪೂರ್ಣಗೊಳ್ಳಬೇಕಿದ್ದು ಅದನ್ನು ಪೂರ್ಣಗೊಳಿಸುವಂತೆ ಬಿಡಬ್ಲ್ಯೂಎಸ್ಎಸ್ ಬಿ ಅಧ್ಯಕ್ಷರಿಗೆ ಸೂಚಿಸಲಾಗಿದೆ. ಶಾಶ್ವತ ಪರಿಹಾರ ನೀಡಬೇಕೆಂಬ ಉದ್ದೇಶದಿಂದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದಲ್ಲದೆ, ಬಡಾವಣೆ-ಓಣಿಯಲ್ಲಿರುವ ಒಳಚರಂಡಿಗಳಲ್ಲಿ ಹೂಳು ತೆಗೆಯಲು ಬಿಬಿಎಂಪಿ ಗೆ ಸೂಚನೆ ನೀಡಿದೆ ಹಾಗೂ ಪ್ರಾಥಮಿಕ ಚರಂಡಿಗಳಲ್ಲಿಯೂ ಹೂಳು ತೆಗೆಯಲು ಸೂಚಿಸಲಾಗಿದೆ. ಒಟ್ಟು ನಾಲ್ಕು ವ್ಯಾಲಿಗಳಲ್ಲಿ ಉಳಿದಿರುವ ಕೆಲಸಗಳ ಬಗ್ಗೆ ಇಂದಿನ ಸ್ಥಿತಿಗತಿಗಳನ್ನು ಆಧರಿಸಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸಲು ಸೂಚಿಸಿದ್ದು, ಜಟಿಲವಾದ ಸವಾಲಿನಲ್ಲಿ ಶಾಶ್ವತ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದು, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದೆ ಎಂಬ ಸಂದೇಶವನ್ನು ಬಿಬಿಎಂಪಿಗೆ ತಿಳಿಸಲು ಇಂದು ಇಲ್ಲಿಯೇ ಸಭೆ ನಡೆಸಿದ್ದಾಗಿ ತಿಳಿಸಿದರು.

ಇದನ್ನೂ ಓದಿ: ಹೊರಮಾವು ವಾರ್ಡ್​ನ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ

ಸಚಿವರು ಸಹ ಭಾಗವಹಿಸಿ ತಮ್ಮ ಅನುಭವಗಳ ಆಧಾರದ ಮೇಲೆ ಕೆಲವು ಆದೇಶಗಳನ್ನು ನೀಡಿದ್ದಾರೆ. ಶಾಶ್ವತ ಪರಿಹಾರ ನೀಡುವ ದಿಕ್ಕಿನಲ್ಲಿ ಪ್ರಥಮ ಬಾರಿಗೆ ಕೆಲಸಗಳು ಪ್ರಾರಂಭವಾಗಿವೆ ಎಂದರು.

ಒತ್ತುವರಿ: 2626 ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ಗುರುತಿಸಿದ್ದು, ಅದರಲ್ಲಿ 1480 ತೆರವುಗೊಳಿಸಿದ್ದಾರೆ, ಇನ್ನು 714 ನ್ನು ತೆರೆವುಗೊಳಿಸಲು ಕಾನೂನಾತ್ಮಕವಾಗಿ ಕ್ರಮ ಜರುಗಿಸುತ್ತೇವೆ/ ಬಡವರಿಗೆ ತೊಂದರೆ ಕೊಡಬೇಡಿ ಅವರಿಗೆ ಸ್ಥಳಾಂತರಕ್ಕೆ ಸಮಯ ನೀಡುವಂತೆ ಸೂಚಿಸಲಾಗಿದೆ. ದೊಡ್ಡ ಬಿಲ್ಡರ್ ಗಳು ಒತ್ತುವರಿ ಮಾಡಿದ್ದರೆ ಕೂಡಲೇ ಅದನ್ನು ತೆಗೆಯಲು ಸ್ಪಷ್ಟ ಆದೇಶ ನೀಡಲಾಗಿದೆ.

ನೇಮಕಾತಿ: 130 ಇಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕಂದಾಯ ಸಚಿವರು ಸಭೆಗೆ ಹಾಜರಾಗದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಪೂರ್ವನಿಗದಿತ ಕಾರ್ಯಕ್ರಮಗಳಂತೆ ಪ್ರವಾಹ ಉಂಟಾಗಿರುವ ಹಾಸನ ಮತ್ತಿತರೆಡೆ ಪ್ರವಾಸಕ್ಕೆ ತೆರಳಿದ್ದಾರೆ ಎಂದರು. ರಸ್ತೆಗುಂಡಿಗಳನ್ನು ಮುಚ್ಚುವ ಕುರಿತ ಪ್ರಶ್ನೆಗೆ ಮಾಹಿತಿ ನೀಡಿದ ಮುಖ್ಯಮಂತ್ರಿಗಳು, ಮಳೆ ನಿಂತ ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಛಲು ಈಗಾಗಲೇ ಸೂಚಿಸಿದ್ದು, ಒಂದು ಅಡಿಗಿಂತ ಕೆಳಗಿರುವುದಕ್ಕೆ ಪ್ರಥಮ ಆದ್ಯತೆ ನೀಡಲು ತಿಳಿಸಿದ್ದು, ಅರ್ಧ ಕಿ.ಮೀ ಗಿಂತ ಹೆಚ್ಚು ಹಾಳಾಗಿರುವ ರಸ್ತೆಗಳಿಗೆ ಡಾಂಬರು ಹಾಕಲು ಸೂಚನೆ ನೀಡಲಾಗಿದೆ ಎಂದರು.

ಬಿ.ಬಿ.ಎಂ.ಪಿ ಕಚೇರಿಯಲ್ಲಿ ಬೃಹತ್ ನೀರುಗಾಲುವೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಸೂಚನೆಗಳು ಇಂತಿವೆ

  1. ಬೆಂಗಳೂರಿನ ಅಭಿವೃದ್ಧಿಗೆ ಪ್ರಾಥಮಿಕ ಮಳೆ ನೀರು ಚರಂಡಿ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಯಿತು.
  2. ರಸ್ತೆಗಳಲ್ಲಿ ಹಾಗೂ ಮನೆಗಳಿಗೆ ನೀರು ನುಗ್ಗದಂತೆ ತುರ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು.
  3. ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಅಡಿಯಲ್ಲಿ ವಿಳಂಬ ಮಾಡದೆ ಕಾಮಗಾರಿ ಕೈಗೊಳ್ಳುವುದು ಹಾಗೂ ಅಗತ್ಯವಿದ್ದಲ್ಲಿ ಇತರೆ ಪ್ರಾಧಿಕಾರದವರೊಂದಿಗೆ ಮಾತನಾಡಿ ಕಾಮಗಾರಿಯನ್ನು ಜನವರಿಯೊಳಗೆ ಪ್ರಾರಂಭಿಸಬೇಕು.
  4. ಪ್ರತಿ 15 ದಿನಗಳಿಗೊಮ್ಮೆ ಪ್ರಾಥಮಿಕ ಚರಂಡಿಗಳ ಕಾಮಗಾರಿಗಳನ್ನು ಸಿಎಂ ಡ್ಯಾಶ್ ಬೋರ್ಡ್ ನಲ್ಲಿ ಖುದ್ದು ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
  5. ಕಾಮಗಾರಿ ಪ್ರಗತಿ ಬಗ್ಗೆ ಇಂಜಿನಿಯರುಗಳಿಗೆ ಖುದ್ದು ಕರೆ ಮಾಡಿ ಮುಖ್ಯಮಂತ್ರಿಗಳು ವಿಚಾರಿಸುವುದಾಗಿ ತಿಳಿಸಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಮುಲಾಜಿಲ್ಲದೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
  6. ಒತ್ತುವರಿ ಆಗಿರುವಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.
  7. ಇಂದಿನ ವಸ್ತುಸ್ಥಿತಿಯ ಆಧಾರದ ಮೇಲೆ ಸಮಗ್ರವಾದ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿದ ನಂತರ ಕಾಮಗಾರಿ ಕೈಗೊಳ್ಳಲು ಅನುಮೋದನೆಯನ್ನು ತಕ್ಷಣವೇ ನೀಡಲಾಗುವುದು.
  8. ಒಂದೂವರೆ ವರ್ಷದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
  9. ನಗರದ ಮುಖ್ಯ ಚರಂಡಿಗಳ ದುರ್ಬಲ ಸ್ಥಳಗಳನ್ನು ಗುರುತಿಸಿ, ಕಲ್ಲು ಕಟ್ಟಡಗಳನ್ನು ಆರ್.ಸಿ.ಸಿ ಕಟ್ಟಡಗಳನ್ನಾಗಿ ಪರಿವರ್ತಿಸಬೇಕು ಹಾಗೂ ಒತ್ತುವರಿಯನ್ನು ತೆರವುಗೊಳಿಸಬೇಕು.
  10. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಇಂಜಿನಿಯರುಗಳಿಗೆ ಕೆಲಸವನ್ನು ಮರುಹಂಚಿಕೆ ಮಾಡಲಾಗುವುದು.
  11. ಕಾಮಗಾರಿಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು 197 ಕ್ಷೇತ್ರ ಇಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ಅನುಮೋದನೆ ನೀಡಲಾಗಿದೆ.
  12. ಮಳೆ ನೀರು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು.
  13. ಸಂಸ್ಕರಿಸದ ನೀರನ್ನು ಮಳೆ ನೀರು ಚರಂಡಿಗೆ ಕಡ್ಡಾಯವಾಗಿ ಹರಿಸಬಾರದು. ಅದಕ್ಕಾಗಿ ಎಸ್.ಟಿ.ಪಿಗಳನ್ನು ಸರಿಪಡಿಸುವುದು.
  14. ಬಿಡಿಎ ಬಡಾವಣೆಗಳಲ್ಲಿ ವಿದ್ಯುಚ್ಚಕ್ತಿ, ಚರಂಡಿ ಹಾಗೂ ನೀರಿನ ವ್ಯವಸ್ಥೆ ಮಾಡುವ ಬಗ್ಗೆ ಪ್ರತ್ಯೇಕ ಸಭೆ ನಡೆಸಲಾಗುವುದು.

LEAVE A REPLY

Please enter your comment!
Please enter your name here