ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕುಸುಮ್ ಬಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ 40,000 ಸೋಲಾರ್ ಕೃಷಿ ಪಂಪ್ ಸೆಟ್‌ಗಳಿಗೆ ಅನುಮೋದನೆ ನೀಡಲಾಗಿದೆ. ರೈತರಿಗೆ ಸ್ವತಂತ್ರ ವಿದ್ಯುತ್ ಮೂಲ ಕಲ್ಪಿಸಲು ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅನುಷ್ಠಾನವನ್ನು ವೇಗಗೊಳಿಸಲು ಸಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕುಸುಮ್ ಬಿ ಯೋಜನೆಯಡಿ, ರೈತರಿಗೆ ಶೇ. 80ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ಇದರಲ್ಲಿ ಕೇಂದ್ರದಿಂದ ಶೇ.30 ಮತ್ತು ರಾಜ್ಯದಿಂದ ಶೇ.50, ಉಳಿದ ಶೇ.20 ಫಲಾನುಭವಿಗಳಿಂದ ಒದಗಿಸಲಾಗುವುದು.
ಈ ಹಂತದಲ್ಲಿ ಹೆಚ್ಚುವರಿಯಾಗಿ 25,000 ರೈತರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ₹752 ಕೋಟಿ ರೂಪಾಯಿಯ ಅನುದಾನವನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ. ಯೋಜನೆಯ ಸಮರ್ಪಕ ಅನುಷ್ಠಾನದಿಂದ ಸಬ್ಸಿಡಿ ಭಾರವೂ ಕಡಿಮೆಯಾಗಲಿದೆ ಎಂದು ಸಿಎಂ ಹೇಳಿದರು.
4.5 ಲಕ್ಷ ಅನಧಿಕೃತ ಐಪಿ ಸೆಟ್ಗಳ ಪೈಕಿ 2 ಲಕ್ಷ ಸಂಪರ್ಕಗಳನ್ನು ಈಗಾಗಲೇ ಅಧಿಕೃತಗೊಳಿಸಲಾಗಿದೆ. ಉಳಿದ ಅನಧಿಕೃತ ಸಂಪರ್ಕಗಳಿಗೂ ಆದ್ಯತೆ ನೀಡುವಂತೆ ಚರ್ಚೆ ನಡೆದಿದೆ.
ಯೋಜನೆಯಡಿ ರೈತರಿಗೆ ಸ್ವಂತ ವಿದ್ಯುತ್ ತಯಾರಿಕೆಯ ಅವಕಾಶ ಕಲ್ಪಿಸಲಾಗಿದ್ದು, ವಿಭಾಗವು ಟ್ರಾನ್ಸ್ಫಾರ್ಮರ್‌ಗಳನ್ನು ಒದಗಿಸುತ್ತದೆ.
2024-25 ನೇ ಆರ್ಥಿಕ ವರ್ಷದಲ್ಲಿ ₹12,785 ಕೋಟಿ ರೂಪಾಯಿಯ ಅನುದಾನ ಹಂಚಿಕೆಯಾಗಿದ್ದು, ಈ ಪೈಕಿ ₹11,720 ಕೋಟಿ ಫೆಬ್ರವರಿ 2025ರೊಳಗೆ ಬಿದುಗಡೆ ಆಗಿದೆ. ಮುಂದಿನ 2025-26 ಆರ್ಥಿಕ ವರ್ಷಕ್ಕೆ ₹16,021 ಕೋಟಿ ರೂಪಾಯಿಯ ಬಜೆಟ್ ಮೀಸಲಾಗಿದೆ.
ಈ ಸಭೆಯಲ್ಲಿ ಇಂಧನ ಸಚಿವ ಕೆಜೆ ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರು ಕೃಷಿಯಲ್ಲಿ ಪುನಶ್ಚೇತನ ಶಕ್ತಿ ಬಳಕೆ, ರೈತರಿಗೆ ನೇರ ಲಾಭ ತಲುಪಿಸುವುದರ ಮಹತ್ವವನ್ನು ಪುನರುಚ್ಚರಿಸಿದರು.