ಬೆಂಗಳೂರು:
ನೀರಾವರಿ ಯೋಜನೆಗಳು, ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವಿಕೆ ಮತ್ತು ರಾಜ್ಯದಲ್ಲಿ ಹೂಡಿಕೆಗೆ ಒತ್ತು ನೀಡುವ ಮೂರು ಕ್ಷೇತ್ರಗಳನ್ನು ನಿಭಾಯಿಸಲು ಮೂರು ಸಂಪುಟ ಉಪ ಸಮಿತಿಗಳನ್ನು ರಚಿಸುವ ಮತ್ತು ಅದಕ್ಕೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಬುಧವಾರ ನಡೆದ ಸಚಿವ ಸಂಪುಟ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು, ಕೃಷ್ಣಾ ನದಿ, ಕಾವೇರಿ, ಮಹದಾಯಿ ಮತ್ತಿತರ ನದಿಗಳ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಉಪ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಹೇಳಿದರು.
ಇದನ್ನು ಓದಿ: ಅನ್ನಭಾಗ್ಯ ಯೋಜನೆ ಜುಲೈನಿಂದಲೇ ಪ್ರಾರಂಭ; 5 ಕೆಜಿ ಅಕ್ಕಿ ಬದಲು 170 ರೂ. ಹಣ ನೀಡಲು ಸಂಪುಟ ನಿರ್ಧಾರ
ಈ ಉಪ ಸಮಿತಿಯು ನದಿ ಯೋಜನೆಗಳಿಗೆ ಸಂಬಂಧಿಸಿದ ವಿವಿಧ ನ್ಯಾಯಾಲಯ ಮತ್ತು ನ್ಯಾಯಾಧಿಕರಣದ ಆದೇಶಗಳ ಅನುಷ್ಠಾನದ ಬಗ್ಗೆಯೂ ಪರಿಶೀಲಿಸುತ್ತದೆ.
ಸಂಪುಟ ಉಪ ಸಮಿತಿಗಳಿಗೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಟೆಂಡರ್ ಮೊತ್ತವನ್ನು 50 ಲಕ್ಷದಿಂದ ಒಂದು ಕೋಟಿಗೆ ಹೆಚ್ಚಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಜುಲೈ 3ರಿಂದ ಆರಂಭವಾಗಲಿರುವ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಸಾರ್ವಜನಿಕ ಖರೀದಿಗೆ ಸಂಬಂಧಿಸಿದ ಕರ್ನಾಟಕ ಪಾರದರ್ಶಕ ಕಾಯಿದೆಗೆ ತಿದ್ದುಪಡಿ ತರಲಾಗುವುದು ಎಂದು ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.