ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಕಾನೂನು ಸುವ್ಯವಸ್ಥೆ ವೈಫಲ್ಯಗಳು, ವಿಶೇಷವಾಗಿ ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ದಂಧೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಡಿಜಿಪಿ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್ಪಿ, ಐಜಿ, ಡಿಐಜಿ, ಎಡಿಜಿಪಿ ಮಟ್ಟದ ಅಧಿಕಾರಿಗಳೊಂದಿಗೆ ಸಿಎಂ ಗಂಭೀರ ಚರ್ಚೆ ನಡೆಸಿದರು. ಗೃಹ ಸಚಿವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಪೊಲೀಸ್ ಕಾರ್ಯಕ್ಷಮತೆ ಕುರಿತು ಸಿಎಂ ಖಡಕ್ ಧಾಟಿಯಲ್ಲಿ ಮಾತನಾಡಿದರು.
ಬಳ್ಳಾರಿ ಬ್ಯಾನರ್ ಗಲಾಟೆ: “ಸೀನಿಯರ್ ಅಧಿಕಾರಿಗಳೇ ಫೇಲ್ಯೂರ್”
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ವಿವಾದ ಹಾಗೂ ಗಲಭೆಯನ್ನು ಉಲ್ಲೇಖಿಸಿದ ಸಿಎಂ, ಪರಿಸ್ಥಿತಿ ನಿಯಂತ್ರಣದಲ್ಲಿ ಸ್ಥಳೀಯ ಎಸ್ಪಿ ಮತ್ತು ಐಜಿ ವಿಫಲರಾಗಿದ್ದಾರೆ ಎಂದು ನೇರವಾಗಿ ಹೇಳಿದರು.
“ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಕಚೇರಿಯಲ್ಲಿ ಕುಳಿತು ಆರ್ಡರ್ ನೀಡುವುದಷ್ಟೇ ಸಾಕಾಗುವುದಿಲ್ಲ. ನೀವು ಸ್ಥಳಕ್ಕೆ ಹೋಗಿ ಪರಿಸ್ಥಿತಿಯನ್ನು ಹ್ಯಾಂಡಲ್ ಮಾಡಬೇಕಿತ್ತು,” ಎಂದು ಸಿಎಂ ಗರಂ ಆದರು.
ಘಟನೆಯನ್ನು ಸಮರ್ಪಕವಾಗಿ ನಿಭಾಯಿಸದ ಹಿನ್ನೆಲೆ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯ ಎಂಬ ಸಂದೇಶವನ್ನು ಸಿಎಂ ಸ್ಪಷ್ಟವಾಗಿ ನೀಡಿದರು.

ಡ್ರಗ್ಸ್ ದಂಧೆ: ‘ಮಹಾರಾಷ್ಟ್ರ ಪೊಲೀಸರು ಬಂದು ದಾಳಿ ಮಾಡ್ತಿರೋದು ನಾಚಿಕೆ’
ಬೆಂಗಳೂರು ಮತ್ತು ಮೈಸೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ಡ್ರಗ್ಸ್ ದಂಧೆ ಮೇಲೆ ದಾಳಿ ನಡೆಸಿರುವುದು, ರಾಜ್ಯ ಪೊಲೀಸ್ ಇಲಾಖೆಗೆ ಮಾತ್ರವಲ್ಲ, ಸರ್ಕಾರಕ್ಕೂ ಹಿನ್ನಡೆ ಎಂದು ಸಿಎಂ ಅಭಿಪ್ರಾಯಪಟ್ಟರು.
“ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕು ಅಂತ ಹೇಳ್ತಾ ಇದ್ದೇವೆ. ಆದರೆ ಹೊರರಾಜ್ಯದ ಪೊಲೀಸರು ಬಂದು ಇಲ್ಲಿ ದಂಧೆ ಬಯಲು ಮಾಡ್ತಿದ್ದಾರೆ ಅಂದ್ರೆ ಇದು ಗಂಭೀರ ವಿಚಾರ,” ಎಂದು ಸಿಎಂ ಹೇಳಿದರು.
ಡ್ರಗ್ಸ್ ದಂಧೆ ನಡೆಸುವವರ ವಿರುದ್ಧ ತಜ್ಞರ ಸಹಾಯದಿಂದ ಕಠಿಣ ಕ್ರಮ, ಅಗತ್ಯವಿದ್ದರೆ ಅಟೆಂಪ್ಟ್ ಮರ್ಡರ್ ಕೇಸ್ಗಳಂತೆ ಕಠಿಣ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಬೇಕು ಎಂದು ಸಿಎಂ ಖಡಕ್ ಸೂಚನೆ ನೀಡಿದರು.
88 ಪ್ರಕರಣಗಳಲ್ಲಿ ಪೊಲೀಸರೇ ಆರೋಪಿ!
ಸಭೆಯಲ್ಲಿ ಮತ್ತೊಂದು ಗಂಭೀರ ಅಂಶವನ್ನು ಸಿಎಂ ಮುಂದಿಟ್ಟರು. ರಾಜ್ಯದಲ್ಲಿ 88 ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿಯೇ ಆರೋಪಿಗಳಾಗಿದ್ದಾರೆ ಎಂಬ ಅಂಕಿಅಂಶಗಳು ಸರ್ಕಾರಕ್ಕೂ ಪೊಲೀಸ್ ಇಲಾಖೆಯಿಗೂ ಕಳಂಕ ಎಂದು ಸಿಎಂ ಹೇಳಿದರು.
“ಪೊಲೀಸರು ಅಪರಾಧಗಳಲ್ಲಿ ಭಾಗಿಯಾಗೋದು ಅಕ್ಷಮ್ಯ. ಇದು ಸರ್ಕಾರಕ್ಕೂ, ಪೊಲೀಸ್ ಇಲಾಖೆಯ ಗೌರವಕ್ಕೂ ದೊಡ್ಡ ಧಕ್ಕೆ,” ಎಂದು ಸಿಎಂ ಎಚ್ಚರಿಸಿದರು.
ಪೊಲೀಸರು ಎಂದರೆ ಅಪರಾಧಿಗಳು ಭಯಪಡುವಂತೆ ಇರಬೇಕು, ಪೊಲೀಸ್ ಖಾಕಿಯೇ ಅಪರಾಧದಲ್ಲಿ ತೊಡಗಿಸಿಕೊಳ್ಳಬಾರದು ಎಂದು ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸ್ಪಷ್ಟ ಸಂದೇಶ
ಸಭೆಯ ಕೊನೆಯಲ್ಲಿ ಸಿಎಂ ಸಿದ್ದರಾಮಯ್ಯ, ಕಾನೂನು ಸುವ್ಯವಸ್ಥೆಯಲ್ಲಿ ನಿರ್ಲಕ್ಷ್ಯ, ವಿಳಂಬ, ಅಥವಾ ವೈಫಲ್ಯವನ್ನು ಸರ್ಕಾರ ಇನ್ನು ಸಹಿಸುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು. ಖಾಕಿ ತೊಟ್ಟ ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ಸಿಎಂ ಕಟ್ಟುನಿಟ್ಟಾಗಿ ಸೂಚಿಸಿದರು.
