ಮದ್ದೂರು/ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ₹1,146 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಅಭಿವೃದ್ಧಿಗೆ ಹಣವಿಲ್ಲ ಎಂಬ ಬಿಜೆಪಿ ಸುಳ್ಳು ಪ್ರಚಾರಕ್ಕೆ ಇದು ನಮ್ಮ ಉತ್ತರ,” ಎಂದು ಅವರು ಘೋಷಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ ನೀರಾವರಿ ನಿಗಮ ಕೇವಲ ಎರಡು ವರ್ಷದಲ್ಲಿ ₹560 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದಾಗಿ ವಿವರಿಸಿದರು. “ಬಿಜೆಪಿ ನಾಲ್ಕು ವರ್ಷ ಆಡಳಿತ ನಡೆಸಿದರೂ ಮದ್ದೂರಿಗೆ ಏನು ಕೊಟ್ಟಿತು ಎಂಬುದನ್ನು ಜನರಿಗೆ ತೋರಿಸಲಿ,” ಎಂದು ಸವಾಲು ಹಾಕಿದರು.
ಮಂಡ್ಯ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕಾಗಿ ಈಗಾಗಲೇ ₹52 ಕೋಟಿ ನೀಡಿದ್ದು, ಇತ್ತೀಚೆಗೆ ಹೆಚ್ಚುವರಿ ₹10 ಕೋಟಿ ಸಹಾಯಧನವನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದರು. ಹಾಲು ಉತ್ಪಾದಕರಿಗೆ ಲೀಟರ್‌ಗೆ ₹5 ಸಹಾಯಧನವನ್ನು ಘೋಷಿಸಿರುವುದು ಸಹ ನಮ್ಮ ಸರ್ಕಾರದ ಕಾರ್ಯವೆಂದರು.
ಶಾಸಕ ಉದಯ್ ಕುಮಾರ್ ಅವರ ಮನವಿಗೆ ಸ್ಪಂದಿಸಿ ಮಂಡ್ಯ ನಗರದ 100 ಅಡಿ ರಸ್ತೆಗೆ ಅನುಮೋದನೆ ನೀಡಿರುವುದಾಗಿ ಘೋಷಿಸಿದ ಸಿಎಂ, “ಉದಯ್ ಅವರು ಹೆಚ್ಚು ಮಾತುಗಳಲ್ಲದೆ ಕೆಲಸದಲ್ಲಿ ಗಮನ ಹರಿಸುತ್ತಾರೆ,” ಎಂದು ಪ್ರಶಂಸಿಸಿದರು.
ಹಾಮಿಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಬಲಪಡಿಸಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು. “ನಮ್ಮ ಐದು ಗ್ಯಾರಂಟಿಗಳಿಂದ ಜನರ ಖರೀದಿ ಶಕ್ತಿ ಹೆಚ್ಚಿದ್ದು, ಕರ್ನಾಟಕವು ತಲಾ ಆದಾಯದಲ್ಲಿ ದೇಶದ ಮೊದಲ ಸ್ಥಾನವನ್ನು ಪಡೆದಿದೆ,” ಎಂದು ಹೇಳಿದರು.
ಕೇಂದ್ರದಿಂದ ಗೊಬ್ಬರ ಪೂರೈಕೆ ವಿಚಾರದಲ್ಲಿ ಅಸಹಕಾರ: ರಾಜ್ಯಕ್ಕೆ ಅಗತ್ಯವಿರುವಷ್ಟು ಗೊಬ್ಬರ ಪೂರೈಕೆ ಮಾಡದೇ ಕೇಂದ್ರ ಸರ್ಕಾರ ರೈತರ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಸಿಎಂ ಆರೋಪಿಸಿದರು. “ಈ ಕುರಿತು ಪತ್ರ ಬರೆದಿದ್ದರೂ ಒಪ್ಪಂದದ ಗೊಬ್ಬರ ಇನ್ನೂ ಬಂದಿಲ್ಲ. ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲಿ,” ಎಂದು ಅವರು ಆಗ್ರಹಿಸಿದರು.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸಚಿವರುಗಳು ಎಚ್.ಸಿ. ಮಹದೇವಪ್ಪ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ರಹೀಂ ಖಾನ್, ಶಾಸಕರು ರವಿ ಗಣಿಗ, ದಿನೇಶ್ ಗೂಳೀಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಉದಯ್ ಕುಮಾರ್ ವಹಿಸಿದ್ದರು.