Home ಬೆಂಗಳೂರು ನಗರ Lorry Strike | ಮುಷ್ಕರ ನಿರತ ಲಾರಿ ಮಾಲೀಕರ ಜೊತೆಗಿನ ಸಿಎಂ ಸಂಧಾನ ಮಾತುಕತೆ ವಿಫಲ

Lorry Strike | ಮುಷ್ಕರ ನಿರತ ಲಾರಿ ಮಾಲೀಕರ ಜೊತೆಗಿನ ಸಿಎಂ ಸಂಧಾನ ಮಾತುಕತೆ ವಿಫಲ

12
0
Lorry Strike

ಬೆಂಗಳೂರು : ಇಲ್ಲಿನ ಕಾವೇರಿ ನಿವಾಸದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಮುಷ್ಕರ ನಿರತ ಲಾರಿ ಮಾಲಕರ ಸಂಘದ ಪ್ರತಿನಿಧಿಗಳ ಸಂಧಾನ ಸಭೆಯು ವಿಫಲವಾಗಿದ್ದು, ಮುಷ್ಕರವನ್ನು ಮುಂದುವರಿಸುವುದಾಗಿ ಲಾರಿ ಮಾಲಕರ ಸಂಘವು ಘೋಷಿಸಿದೆ.

ಈ ಬಾರಿ ಬಜೆಟ್‍ನಲ್ಲಿ ಡೀಸೆಲ್ ಮೇಲಿನ ಸುಂಕ 2 ರೂ. ಹೆಚ್ಚಳ ಮಾಡಲಾಗಿದೆ. ಆದರೆ, ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಡೀಸೆಲ್ ದರ ನಮ್ಮ ರಾಜ್ಯದಲ್ಲಿ ಕಡಿಮೆಯಿದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮುಷ್ಕರವನ್ನು ಕೈಬಿಡುವಂತೆ ಸಿಎಂ ಮನವಿ ಮಾಡಿದರು.

ಲಾರಿ ಮಾಲಕರ ಸಂಘದ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಅರಿವಿದೆ. ಸರಕಾರ ಬಡವರ ಪರವಾಗಿದ್ದು, ನಮ್ಮೊಂದಿಗೆ ಸಹಕರಿಸಬೇಕು. ರಸ್ತೆಗಳ ಸುಧಾರಣೆಗೆ ರಾಜ್ಯ ಸರಕಾರ ಪ್ರತಿ ವರ್ಷ ಸುಮಾರು 14 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. 83 ಸಾವಿರ ಕೋಟಿ ರೂ. ಈ ವರ್ಷ ಬಂಡವಾಳ ವೆಚ್ಚಕ್ಕೆ ಮೀಸಲಿರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇನ್ನು ಸಂಚಾರಿ ದಟ್ಟಣೆ ಅವಧಿಯಲ್ಲಿ ನಗರದ ಒಳಗೆ ಲಾರಿಗಳು ಪ್ರವೇಶಿಸುವುದರ ಬಗ್ಗೆ ಇರುವ ನಿಬರ್ಂಧ ತೆರವು ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಕುರಿತಾಗಿ ಇನ್ನೊಮ್ಮೆ ಲಾರಿ ಮಾಲೀಕರ ಸಂಘದೊಂದಿಗೆ ಸಭೆ ನಡೆಸಲಾಗುವುದು. ಹೀಗಾಗಿ ಮುಷ್ಕರ ಹಿಂಪಡೆಯಿರಿ ಎಂದು ಸಿಎಂ ಸಿದ್ದರಾಮಯ್ಯ ಕೋರಿದರು. ಇದಕ್ಕೆ ಒಪ್ಪದ ಲಾರಿ ಮಾಲಕರ ಸಂಘದ ಪ್ರತಿನಿಧಿಗಳು, ತಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ, ಸಭೆಯಿಂದ ಹೊರನಡೆದು ಮುಷ್ಕರ ಮುಂದುವರೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹಾಗೂ ಲಾರಿ ಮಾಲಕರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here