
ಬೆಂಗಳೂರು: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಬಡವರಿಗೆ 5 ಲಕ್ಷ ರೂ. ನೆರವು ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮನವಿ ಮಾಡಿದರು.
ರಾಜ್ಯ ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು, ರಾಜ್ಯಾದ್ಯಂತ ಮುಂಗಾರು ಮಳೆ ಆರ್ಭಟಿಸುತ್ತಿದೆ. ನಾನು ಈಗಾಗಲೇ ಶಿಕಾರಿಪುರ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಮಳೆ ಜಾಸ್ತಿಯಾದ ಪರಿಣಾಮ ಮನೆಗಳು, ಮನೆ ಗೋಡೆಗಳು ಕುಸಿದು ಬೀಳುತ್ತಿವೆ. ಅಂಕೋಲಾ ತಾಲ್ಲೂಕಿನಲ್ಲಿ ಭೂಕುಸಿತದಿಂದ ಆದ ಅನಾಹುತ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಎಂದರು.
ಹಿಂದೆ ಎನ್‍ಡಿಆರ್‍ಎಫ್ ನಿಯಮದ ಪ್ರಕಾರ ಮನೆ ಕಳೆದುಕೊಂಡ ಬಡವರಿಗೆ ಸುಮಾರು 1 ಲಕ್ಷ ಕೊಡಬೇಕಿತ್ತು. ಅದು ಸಾಕಾಗುವುದಿಲ್ಲ, ಬಡವರಿಗೆ ನೆರವಾಗುವ ದೃಷ್ಟಿಯಿಂದ ಸಹಾನುಭೂತಿ ತೋರಿಸಿ 5 ಲಕ್ಷ ನೀಡುವ ನಿರ್ಧಾರವನ್ನು ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ರಾಜ್ಯ ಸರಕಾರವು ಕೈಗೊಂಡಿತ್ತು ಎಂದು ವಿವರಿಸಿದರು.
ಗೋಡೆ ಕುಸಿದ ಮನೆಗೆ ಎನ್‍ಡಿಆರ್‍ಎಫ್ ನಿಯಮದ ಪ್ರಕಾರ 40 ಸಾವಿರ ಕೊಡುತ್ತಿದ್ದರು. ಅದನ್ನು ಒಂದು ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಮನೆಗಳಿಗೆ ನೀರು ನುಗ್ಗಿತ್ತೋ ಅಲ್ಲಿ 10 ಸಾವಿರ ರೂ. ಕೊಡುತ್ತಿದ್ದರು ಎಂದರು.
ಶಿರೂರು ಗುಡ್ಡ ಕುಸಿತದಲ್ಲಿ ಲಕ್ಷ್ಮಣ ನಾಯ್ಕರ ಕುಟುಂಬದ ಹಲವರು ಮೃತರಾಗಿದ್ದು, ಹೋಟೆಲ್ ಕೆಲಸದಲ್ಲಿದ್ದ ಜಗನ್ನಾಥ ನಾಯ್ಕ ಅವರು ನಾಪತ್ತೆಯಾಗಿದ್ದಾರೆ. ಕುಟುಂಬದ ಮೂವರು ಮಹಿಳೆಯರು ನಿರ್ಗತಿಕರಾಗಿದ್ದಾರೆ. ಆದರೆ, ಅವರ ಮನೆಗೆ ಶಾಸಕರು, ಸಚಿವರು ಭೇಟಿ ಕೊಟ್ಟಿಲ್ಲ ಎಂದು ತಿಳಿಸಿದರು. ಆ ಕುಟುಂಬಕ್ಕೂ ಪರಿಹಾರ ಕೊಡಿ. ಅಲ್ಲದೆ, ಮನೆಗಳ ಸ್ಥಳಾಂತರ ಮಾಡಬೇಕಿದೆ ಎಂದು ಅವರು ಒತ್ತಾಯಿಸಿದರು.