ಬೆಂಗಳೂರು:
ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡುವ ವೇಳೆ ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ. ಇದರ ವಿರುದ್ಧ ರಾಜ್ಯ ಚುನಾವಣಾಧಿಕಾರಿಗೆ ಇಂದು ದೂರು ಸಲ್ಲಿಸಲಾಗಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡುತ್ತ ಜನರನ್ನು ಮೆಚ್ಚಿಸಲು ಪೊಲೀಸರಿಗೆ ಬೆದರಿಕೆ ಒಡ್ಡಲಾಗಿದೆ. ‘ನಮ್ಮ ಸರಕಾರ ಬಂದರೆ ನಿಮ್ಮನ್ನು ನೋಡಿಕೊಳ್ತೇನೆ. ನೀವು ಖಾಕಿ ಬಿಚ್ಚಿಟ್ಟು ಕೆಲಸ ಮಾಡಿ’ ಎಂದು ಬೆದರಿಸಿದ್ದಾರೆ. ಇದು ಮೊದಲ ಬಾರಿ ಅಲ್ಲ. ಒಂದು ತಿಂಗಳ ಹಿಂದೆ ರಾಜ್ಯದ ಡಿಐಜಿ, ಐಜಿಯವರಿಗೆ ಧಮ್ಕಿ ಹಾಕಿದ್ದರು. ನಮ್ಮ ಸರಕಾರ ಬಂದಾಗ ನಿಮ್ಮನ್ನು ನೋಡಿಕೊಳ್ಳುವುದಾಗಿ ಹೇಳಿದ್ದರು ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರು ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಹೆದರಿಸಿ ಬೆದರಿಸುವುದು ನೇರವಾಗಿ ನೀತಿಸಂಹಿತೆಯ ಉಲ್ಲಂಘನೆ ಎಂದು ಆಕ್ಷೇಪಿಸಿದರು. ಪೊಲೀಸರ ಕೆಲಸಕ್ಕೆ ಅಡ್ಡಿ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮಕ್ಕೆ ಕೋರಿ ಮನವಿ ಸಲ್ಲಿಸಿದ್ದಾಗಿ ತಿಳಿಸಿದರು.
ಜಮೀರ್ ಖಾನ್ ಅವರು ಹುಮ್ನಾಬಾದಿನ ಚುನಾವಣಾ ಸಭೆಯಲ್ಲಿ ಮಾತನಾಡುವ ವೇಳೆ ರಾಷ್ಟ್ರಧ್ವಜ ಬಳಸಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ಸಿಗೆ ದೇಶದ ಧ್ವಜ, ಪ್ರಧಾನಿ ಬಗ್ಗೆ ಗೌರವ ಇಲ್ಲ. ದೇಶದ ಯಾವುದೇ ವಿಚಾರಗಳ ಬಗ್ಗೆ ಗೌರವ ಇಲ್ಲ ಎಂದು ತಿಳಿಸಿದರು. ಇದು ಕೂಡ ನೀತಿಸಂಹಿತೆಯ ಉಲ್ಲಂಘನೆ. ಪೋಡಿಯಂ ಬಳಸಿದ ಜಮೀರ್ ಖಾನ್, ಇತರರ ಮೇಲೆ ಕೇಸ್ ಹಾಕುವಂತೆ ಮನವಿ ಸಲ್ಲಿಸಿದ್ದಾಗಿ ವಿವರ ನೀಡಿದರು.