ಬೆಂಗಳೂರು : ಸರಕಾರದ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸ್ವಹಿತಾಸಕ್ತಿಯಿಂದ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್ ಪಾರ್ಕ್) ಪ್ರದೇಶದಲ್ಲಿ ಐದು ಎಕರೆ ವಿಸ್ತೀರ್ಣದ ಉದ್ಯಾನವನದ ಜಾಗವನ್ನು ಖಾಸಗಿ ಉದ್ಯಮಿಗೆ ಗುತ್ತಿಗೆಗೆ ನೀಡಲು ಹೊರಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ್ ಎನ್.ಆರ್. ಆರೋಪಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಪತ್ರ ಬರೆದಿರುವ ಅವರು, ಖಾಸಗಿ ಸಂಸ್ಥೆಗಳಿಗೆ ಕಬ್ಬನ್ ಪಾರ್ಕ್‌ನಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಲೀ ಅಥವಾ ಕಚೇರಿಗಳನ್ನು ತೆರೆಯುವುದಕ್ಕಾಗಲೀ ಅವಕಾಶ ನೀಡಬಾರದು ಎಂಬ ಸ್ಪಷ್ಟವಾದ ನಿಯಮವಿದೆ. ಆದರೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಮ್ಮ ಆಪ್ತ ಅಭಿಷೇಕ್ ಪೊದ್ದಾರ್ ಎಂಬವರ ಒಡೆತನದಲ್ಲಿರುವ ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಪೋಟೊಗ್ರಫಿ(ಎಂಎಪಿ) ಟ್ರಸ್ಟ್‌ಗೆ ಕಬ್ಬನ್ ಪಾರ್ಕ್‌ನಲ್ಲಿ ಐದು ಎಕರೆಗಳಷ್ಟು ವಿಸ್ತೀರ್ಣದ ಸ್ವತ್ತನ್ನು ಗುತ್ತಿಗೆಗೆ ನೀಡಲು ತಯಾರಿ ನಡೆಸಿದ್ದಾರೆ ಎಂದಿದ್ದಾರೆ.


ಈಗ ಕಬ್ಬನ್ ಪಾರ್ಕ್‌ನ 300 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹೈಕೋರ್ಟ್, ವಿಧಾನಸೌಧ, ವಿಕಾಸಸೌಧ, ರಾಜ್ಯ ಕೇಂದ್ರ ಗ್ರಂಥಾಲಯ, ಟೆನ್ನಿಸ್ ಕ್ರೀಡಾಂಗಣ, ಜವಹಾರ್ ಬಾಲ ಭವನ, ಕರ್ನಾಟಕ ಭೂ ಮಾಪನ ಇಲಾಖೆ ಕಚೇರಿ, ಬೆಸ್ಕಾಂ ಕಚೇರಿ ಸೇರಿದಂತೆ ಹಲವಾರು ರಾಜ್ಯ ಮತ್ತು ಕೇಂದ್ರ ಸರಕಾರದ ಕಟ್ಟಡಗಳು ನಿರ್ಮಾಣವಾಗಿರುವುದರಿಂದ ಉದ್ಯಾನವನದ ವಿಸ್ತೀರ್ಣ ಪ್ರಸ್ತುತ 169 ಎಕರೆಗಳಷ್ಟು ಮಾತ್ರ ಇದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿದ್ದಾರೆ.
ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಪದಾಧಿಕಾರಿಗಳು ಈಗಾಗಲೇ ಸಂ ಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಕಬ್ಬನ್ ಪಾರ್ಕ್‌ನಲ್ಲಿ ಕಲೆ ಮತ್ತು ಚಿತ್ರಕಲೆಗೆ ಸಂಬಂಧಿಸಿದಂತೆ ವೆಂಕಟಪ್ಪಆರ್ಟ್ ಗ್ಯಾಲರಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮತ್ತೊಂದು ಆರ್ಟ್ ಗ್ಯಾಲರಿಯ ಅವಶ್ಯಕತೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅಭಿಷೇಕ್ ಪೊದ್ದಾರ್ ಎಂಬ ಆರ್ಥಿಕ ಮತ್ತು ರಾಜಕೀಯ ಪ್ರಭಾವವಿರುವ ಶಿಕ್ಷಣೋದ್ಯಮಿಯೊಂದಿಗೆ ಶಾಮೀಲಾಗಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ 10 ರಿಂದ 15 ಕೋಟಿ ರೂಪಾಯಿಗಳಷ್ಟು ಪ್ರಮಾಣದ ಕಿಕ್ ಬ್ಯಾಕ್ ಪಡೆದು, ಇಂತಹ ಕಾನೂನು ಬಾಹಿರ ಕಾರ್ಯಕ್ಕೆ ಮುಂದಾಗಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ ಎಂದು ರಮೇಶ್ ಎನ್.ಆರ್. ಆರೋಪಿಸಿದ್ದಾರೆ.
ಹೀಗಾಗಿ ಶಾಲಿನಿ ರಜನೀಶ್ ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರಿಸರ ಸಂರಕ್ಷಣೆಯನ್ನೇ ಮುಖ್ಯ ಆದ್ಯತೆಯನ್ನಾಗಿಸಿಕೊಂಡು ನಿರ್ವಹಿಸಲಾಗುತ್ತಿರುವ 155 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಕಬ್ಬನ್ ಪಾರ್ಕ್‌ನಲ್ಲಿ ಇಲ್ಲಿಯವರೆಗೂ ಪಾಲಿಸಿಕೊಂಡು ಬರುತ್ತಿರುವ ಶಿಷ್ಟಾಚಾರಗಳನ್ನು/ಸಂಪ್ರದಾಯಗಳನ್ನು ಮೀರಿ ಯಾವುದೇ ಕಾರಣಕ್ಕೂ ಅಭಿಷೇಕ್ ಪೊದ್ದಾರ್ ಅವರ ಸಂಸ್ಥೆಗೆ ಗುತ್ತಿಗೆಗೆ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.