ಬೆಂಗಳೂರು, ಫೆ.19: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ಸರಿಪಡಿಸಲು ಬೀದಿವಾರು ಹಾಗೂ ಮನೆವಾರು ಸಮಗ್ರ ಮ್ಯಾಪಿಂಗ್ ನಡೆಸಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಅವರು ಹಲವು ಗಂಭೀರ ದೋಷಗಳನ್ನು ಉಲ್ಲೇಖಿಸಿದ್ದಾರೆ. ಒಂದೇ ಕುಟುಂಬದ ಸದಸ್ಯರನ್ನು ಬೇರೆ ಬೇರೆ ಮತಗಟ್ಟೆಗಳು ಮತ್ತು ವಾರ್ಡ್ಗಳಿಗೆ ವಿಂಗಡಿಸಿರುವುದು, ಮನೆ ಸಂಖ್ಯೆ ಹಾಗೂ ರಸ್ತೆ ಸಂಖ್ಯೆಗಳ ತಪ್ಪು ನಮೂದು, ಮತದಾರರ ಹೆಸರುಗಳು ಎರಡು ಅಥವಾ ಹೆಚ್ಚು ಬಾರಿ ಸೇರ್ಪಡೆಗೊಂಡಿರುವುದು, ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಅಂಶಗಳನ್ನು ಅವರು ವಿವರಿಸಿದ್ದಾರೆ. ಕೆಲ ಬೀದಿಗಳಲ್ಲಿ ಸಂಪೂರ್ಣವಾಗಿ ಮತದಾರರ ಹೆಸರುಗಳೇ ಕಾಣೆಯಾಗಿರುವುದಾಗಿ ತಿಳಿಸಿದ್ದಾರೆ.
ಈ ತಪ್ಪುಗಳು ಕೇವಲ ಕಣ್ತಪ್ಪಿನಿಂದ ಆಗಿರುವಂತಿಲ್ಲ, ವ್ಯವಸ್ಥಿತವಾಗಿ ಗೊಂದಲ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ನಡೆದಿರುವ ಸಾಧ್ಯತೆ ಇದೆ ಎಂದು ಡಿಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿಗಳು, ಮನೆಗಳು ಹಾಗೂ ಆ ಮನೆಗಳಲ್ಲಿ ವಾಸಿಸುವ ಎಲ್ಲಾ ಮತದಾರರ ಸಮಗ್ರ ಪರಿಶೀಲನೆ ನಡೆಸಿ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದರಿಂದ ನಕಲಿ ಮತದಾರರನ್ನು ತೆಗೆದುಹಾಕಲು ಮತ್ತು ತಪ್ಪಾಗಿ ಕೈಬಿಟ್ಟ ಮತದಾರರನ್ನು ಮತ್ತೆ ಸೇರ್ಪಡೆಗೊಳಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಚುನಾವಣಾ ಆಯೋಗವು ವಿಶೇಷ ಪರಿಷ್ಕರಣಾ ಅಭಿಯಾನ ಕೈಗೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
