Home ಬೆಂಗಳೂರು ನಗರ ಅಪೂರ್ಣ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ: ರಣದೀಪ್‌ಸಿಂಗ್‌ ಸುರ್ಜೇವಾಲ ಟೀಕೆ

ಅಪೂರ್ಣ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ: ರಣದೀಪ್‌ಸಿಂಗ್‌ ಸುರ್ಜೇವಾಲ ಟೀಕೆ

37
0
Congress Criticizes Prime Minister Narendra Modi for getting inaugurated incomplete Whitefield Metro Line

ಬೆಂಗಳೂರು:

ರಾಜ್ಯದಲ್ಲಿ ಅಪೂರ್ಣ ಕಾಮಗಾರಿಗಳ ಉದ್ಘಾಟನೆ ಸರಣಿ ಮುಂದುವರಿಸಿರುವ ಬಿಜೆಪಿ ಸರ್ಕಾರ, ಜನರ ಸುರಕ್ಷತೆ ಕಡೆಗಣಿಸಿ ಕೇವಲ ಪ್ರಚಾರಕ್ಕಾಗಿ ತರಾತುರಿಯಲ್ಲಿ ವೈಟ್‌ಫೀಲ್ಡ್‌-ಕೆ.ಆರ್‌.ಪುರ ಮೆಟ್ರೋ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಟೀಕಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಶಿವಮೊಗ್ಗ ವಿಮಾನ ನಿಲ್ದಾಣ, ಹಾಗೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಳಿಕ ಇದೀಗ ಅಪೂರ್ಣವಾಗಿರುವ ಮೆಟ್ರೋದ ನೇರಳೆ ವಿಸ್ತರಿತ ಮಾರ್ಗವನ್ನು ಉದ್ಘಾಟಿಸಲು ಮೋದಿ ಬರುತ್ತಿದ್ದಾರೆ. ಇದು ನಗರದ ಸಂಚಾರಿ ಸಮಸ್ಯೆ ಪರಿಹರಿಸುವ ಬದಲು ಮತ್ತಷ್ಟು ಅಡಚಣೆಗೆ ಕಾರಣವಾಗಲಿದೆ ಎಂದು ಹೇಳಿದರು.

ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ… ಮಾರ್ಗದ ಲೋಪದೋಷ ತೆರೆದಿಟ್ಟಅವರು, ಮೂರು ವರ್ಷ ವಿಳಂಬವಾಗಿರುವ ಈ ಕಾಮಗಾರಿ ಪೂರ್ಣಗೊಳ್ಳಲು 6 ತಿಂಗಳು ಬೇಕಿದೆ. ಆದರೆ, ಅಷ್ಟರಲ್ಲಿಯೇ ಕೆ.ಆರ್‌. ಪುರ ಹಾಗೂ ವೈಟ್‌ ಫೀಲ್ಡ್ ಮಾರ್ಗ ಉದ್ಘಾಟಿಸಲಾಗುತ್ತಿದೆ. ಈಗಿರುವ ಮೆಟ್ರೋ ಮಾರ್ಗಗಳನ್ನು ಈ ಕಾರಿಡಾರ್‌ ಸಂಪರ್ಕಿಸುತ್ತಿಲ್ಲ. ಇದರಿಂದಾಗಿ ಕೆ.ಆರ್‌.ಪುರದಿಂದ ಬೈಯಪ್ಪನಹಳ್ಳಿವರೆಗೆ ಬಿಎಂಟಿಸಿ ಬಸ್‌ಗಳ ಫೀಡರ್‌ ಸೇವೆಗೆ ಮುಂದಾಗಿದೆ. ಆದರೆ, ಈಗಾಗಲೇ 8 ಸಾವಿರ ಬಸ್‌ ಕೊರತೆ ಎದುರಿಸುತ್ತಿರುವ ಬಿಎಂಟಿಸಿ ಇಲ್ಲಿ ಹೇಗೆ ಹೆಚ್ಚುವರಿ ಬಸ್‌ ಒದಗಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಅಲ್ಲದೆ, ಕೆ.ಆರ್‌.ಪುರ- ವೈಟ್‌ ಫೀಲ್ಡ್‌ ಮಧ್ಯದ ಟಿನ್‌ ಫ್ಯಾಕ್ಟರಿ ಮೆಟ್ರೋ ನಿಲ್ದಾಣ ಕಾಮಗಾರಿ ಮುಗಿದಿಲ್ಲ, ಹಲವು ಪ್ಲಾಚ್‌ಫಾಮ್‌ರ್‍ ಕೆಲಸಗಳು ಅಪೂರ್ಣವಾಗಿವೆ. ಕಳೆದ ಫೆ. 27ರಂದು ಮೆಟ್ರೋ ರೈಲು ಸುರಕ್ಷತೆ ಆಯುಕ್ತರು ಈ ಮಾರ್ಗದ 58 ನ್ಯೂನತೆಗಳ ತಿಳಿಸಿ ಸರಿಪಡಿಸುವಂತೆ ಸೂಚಿಸಿದ್ದಾರೆ. ಆದರೆ, ಇವುಗಳನ್ನು ಸರಿಪಡಿಸಿ ಮರುಪರಿಶೀಲನೆ ನಡೆಸಿ ಸಂಚಾರಕ್ಕೆ ಅನುಮತಿ ನೀಡುವ ಪ್ರಕ್ರಿಯೆ ನಡೆದಿಲ್ಲ ಎಂದು ಆಪಾದಿಸಿದರು.

ಗರುಡಾಚಾರ್‌ಪಾಳ್ಯದಿಂದ ಕೆ.ಆರ್‌.ಪುರದವರೆಗೆ ಕೇವಲ ಒಂದು ಲೈನ್‌ ಮಾತ್ರವಿದೆ. ಪರೀಕ್ಷಾರ್ಥ ಸಂಚಾರದ ವೇಳೆ ಉದ್ದೇಶಿತ ವೇಗಕ್ಕೂ ಹಾಗೂ ನಿಗದಿತ ವೇಗಕ್ಕೂ ತಾಳೆಯಾಗದಿರುವುದು ಕಂಡು ಬಂದಿದೆ. ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದಲ್ಲಿ ನಿಯಂತ್ರಿತ ಬಾಗಿಲ ವ್ಯವಸ್ಥೆಯಿಲ್ಲ. ಹಲವೆಡೆ ಅಗ್ನಿ ನಂದಕಗಳನ್ನು ಅಳವಡಿಸಿಲ್ಲ. ಇನ್ನೂ ಸಾಕಷ್ಟು ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಕೆಲಸಗಳು ನಡೆಯಬೇಕಿದೆ ಎಂದು ವಿವರಿಸಿದರು.

ಅಲ್ಲದೆ, ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ತೆರಳಲು ಸಾಧ್ಯವಾಗುವಂತೆ ನಿರ್ಮಿಸಬೇಕಾದ ಪರ್ಯಾಯ ಪಾದಚಾರಿ ಮಾರ್ಗವನ್ನು ಕೆಲವೆಡೆ ರೂಪಿಸಲಾಗಿಲ್ಲ. ಇಷ್ಟೊಂದು ನ್ಯೂನ್ಯತೆ ಇರುವಾಗ ನಿರ್ಲಕ್ಷ್ಯ ವಹಿಸಿ ಆರು ತಿಂಗಳ ಮೊದಲೇ ಪ್ರಧಾನಿ ಮೋದಿ ಉದ್ಘಾಟಿಸುತ್ತಿರುವುದು ಯಾಕೆ? ಈವರೆಗೆ ಮೆಟ್ರೋ ಅವಘಡದಲ್ಲಿ 38 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚಿನವರಿಗೆ ಗಾಯವಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಸದನದಲ್ಲಿ ತಿಳಿಸಿದ್ದಾರೆ. ಉದ್ಘಾಟನೆಗೂ ಮುನ್ನ ಈ ಮಾರ್ಗದಲ್ಲಿ ಸಿಎಂಆರ್‌ಎಸ್‌ನಿಂದ ಪುನಃ ಸುರಕ್ಷತಾ ಪರಿಶೀಲನೆ ಆಗಬೇಕಲ್ಲವೆ ಎಂದು ಪ್ರಶ್ನಿಸಿದರು.

ಬಿಜೆಪಿ, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಮನದಟ್ಟಾಗಿದೆ. ಮಾ. 27ರ ಮೊದಲು ಉದ್ಘಾಟಿಸಬೇಕು ಎಂಬ ಒಂದೇ ಕಾರಣಕ್ಕೆ ಅಪೂರ್ಣ ಕಾಮಗಾರಿಗಳನ್ನು ಉದ್ಘಾಟಿಸುತ್ತಿದೆ. ಬಿಜೆಪಿ ಪಬ್ಲಿಸಿಟಿ ಸ್ಟಂಟ್‌, ಮಾಧ್ಯಮದಲ್ಲಿ ಪ್ರಚಾರ ಪಡೆಯುವ ಸಲುವಾಗಿ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಹೇಳಿದರು.

ಇದೇ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಿಸುವ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸದೆ ರಾಜ್ಯ ಸರ್ಕಾರ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದರು.

ಸ್‌ಸಿಗಳಿಗೆ ಶೇ.15 ರಿಂದ ಶೇ.17 ಮತ್ತು ಎಸ್‌ಟಿಗಳಿಗೆ ಶೇ.3 ರಿಂದ ಶೇ.7 ಕ್ಕೆ ಮೀಸಲಾತಿ ಹೆಚ್ಚಿಸುವ ರಾಜ್ಯ ಸರ್ಕಾರದ ಘೋಷಣೆಯನ್ನು ಸಂವಿಧಾನ 9 ನೇ ಶೆಡ್ಯೂಲ್‌ಗೆ ಸೇರಿಸುವವರೆಗೆ ಯಾವುದೇ ಅದಕ್ಕೆ ಮೌಲ್ಯವಿರುವುದಿಲ್ಲ. ಘೋಷಣೆಗಳಿಂದ ಯಾವುದೇ ಪ್ರಯೋಜನವಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕರ್ನಾಟಕದ ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದರು.

ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮಾತನಾಡಿ, ಬಿಜೆಪಿ ನಾಯಕರು ಮೀಸಲಾತಿ ಹೆಚ್ಚಳದ ಬಗ್ಗೆ ಮಾತನಾಡುತ್ತಲೇ ಇದ್ದಾರೆ, ಆದರೆ, ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸದೆ ವಂಚಿಸಿದೆ ಎಂದು ಕಿಡಿಕಾರಿದರು.

LEAVE A REPLY

Please enter your comment!
Please enter your name here