Home ರಾಜಕೀಯ Karnataka Budget | ಸರ್ವರ ಹಿತ ಕಾಂಗ್ರೆಸ್‌ ಸರ್ಕಾರದ ಪಥ: ರಣದೀಪ್‌ ಸುರ್ಜೇವಾಲ

Karnataka Budget | ಸರ್ವರ ಹಿತ ಕಾಂಗ್ರೆಸ್‌ ಸರ್ಕಾರದ ಪಥ: ರಣದೀಪ್‌ ಸುರ್ಜೇವಾಲ

5
0
Randeep Surjewala
Randeep Surjewala
  • ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯೇ ಕಾಂಗ್ರೆಸ್‌ ಸರ್ಕಾರದ ಸಂಕಲ್ಪ
  • ಕ್ರೀಡೆ, ಸಮಾಜ ಕಲ್ಯಾಣ, ಕೃಷಿ, ನೀರಾವರಿ, ಗ್ಯಾರಂಟಿ ಯೋಜನೆಗಳಿಗೆ ಒತ್ತು
  • ಮಹಿಳೆಯರು, ರೈತರು, ಯುವಕರು, ಅಲ್ಪಸಂಖ್ಯಾತರು ಸೇರಿ ಸರ್ವರನ್ನೂ ಕರೆದೊಯ್ಯುವ ಬಜೆಟ್‌

ಬೆಂಗಳೂರು: ʻʻನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ, ಅಬಲೆಯೂ ಅಲ್ಲ. ಅವಳೊಂದು ಮಹಾಶಕ್ತಿʼʼ ಎಂಬುದಾಗಿ ನಮ್ಮ ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದು ಅಕ್ಷರಶಃ ಸತ್ಯ. ಈ ವಾಕ್ಯದಂತೆ ಕರ್ನಾಟಕದ ನಮ್ಮ ಕಾಂಗ್ರೆಸ್‌ ಸರ್ಕಾರ ನಡೆಯುತ್ತಿದೆ. ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಕಾಂಗ್ರೆಸ್‌ ಸರ್ಕಾರದ ಸಂಕಲ್ಪವಾಗಿದೆ. ಅಲ್ಲದೆ, ʻಸರ್ವರ ಹಿತ – ಕಾಂಗ್ರೆಸ್ ಸರ್ಕಾರದ ಫಥʼ ಎಂಬುದು ನಮ್ಮ ಧ್ಯೇಯವಾಕ್ಯವಾಗಿದೆ.

ಶುಕ್ರವಾರ ಮಂಡಿಸಲಾದ 2025-2026ರ ಕರ್ನಾಟಕ ರಾಜ್ಯ ಬಜೆಟ್ 4.೦9 ಲಕ್ಷ ಕೋಟಿ ರೂ.ಗಳನ್ನು ಒಳಗೊಂಡಿದೆ. ಕಳೆದ ವರ್ಷದ ಬಜೆಟ್ ಅಂದಾಜುಗಳಿಗಿಂತ ಶೇ. 10.3ರಷ್ಟು ಬೆಳವಣಿಗೆ ಕಂಡುಬಂದಿದೆ. ಕರ್ನಾಟಕ ರಾಜ್ಯದ ಜಿಡಿಪಿ 7.4% ರಷ್ಟು ಬೆಳೆದಿದೆ ಅದರೊಂದಿಗೆ ಕೃಷಿ ಕ್ಷೇತ್ರದಲ್ಲಿ ಕೂಡ ಶೇ. 4ರಷ್ಟು ಬೆಳವಣಿಗೆಯನ್ನು ಕಂಡಿದೆ. ಕರ್ನಾಟಕ ರಾಜ್ಯದ ಜಿಡಿಪಿ ರಾಷ್ಟ್ರೀಯ ಬೆಳವಣಿಗೆಯನ್ನು ಶೇ. 6.2% ರಷ್ಟು ಮೀರಿಸಿದೆ. ಇದು ಕರ್ನಾಟಕ ರಾಜ್ಯದ ಅಭಿವೃದ್ಧಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ದೃಢಪಡಿಸುತ್ತದೆ.

ಇದೊಂದು ಪರಿಪೂರ್ಣ ಬಜೆಟ್‌ ಆಗಿದ್ದು, ಕ್ರೀಡೆ, ಸಮಾಜ ಕಲ್ಯಾಣ, ಕೃಷಿ, ನೀರಾವರಿ, ಗ್ಯಾರಂಟಿ ಸೇರಿ ಎಲ್ಲ ಕ್ಷೇತ್ರಗಳಿಗೂ ಒತ್ತು ನೀಡುವ ಮೂಲಕ ಮಹಿಳೆಯರು, ರೈತರು, ಯುವಕರು, ಅಲ್ಪಸಂಖ್ಯಾತರು ಸೇರಿ ಸರ್ವರನ್ನೂ ಸಮಾನವಾಗಿ ಕರೆದೊಯ್ಯುವ ಬಜೆಟ್‌ ಇದಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ. ಜೊತೆಗೆ ನಮ್ಮ ಪಕ್ಷ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಲ್ಲಿ ಬಹುತೇಕ ಎಲ್ಲವನ್ನೂ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್‌ ಅವರು ಈಡೇರಿಸಿದ್ದಾರೆ.

ಈ ಬಜೆಟ್ ರಾಜ್ಯದ ಜನರನ್ನು ಸಬಲೀಕರಣಗೊಳಿಸಲಿದೆ. ನಮ್ಮ 5 ಗ್ಯಾರಂಟಿಗಳ ಈಡೇರಿಕೆಗಾಗಿ 51,034 ಕೋಟಿ ರೂ.ಗಳನ್ನು ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಬಂಡವಾಳ ಹೂಡಿಕೆಗಾಗಿ 83,200 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಮೂಲಕ ನುಡಿದಂತೆ ನಡೆದಿದ್ದೇವೆ.

ಇನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಧ್ವನಿಯಾಗಲಾಗಿದೆ. ⁠ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿಯಲ್ಲಿ ಒಟ್ಟು 42,018 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಗೆ 29,992 ರೂ. ಮತ್ತು ಬುಡಕಟ್ಟು ಉಪ ಯೋಜನೆಗೆ 12,026 ಕೋಟಿ ರೂ.ಗಳು ಸೇರಿವೆ. ಅಲ್ಲದೆ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಡಿಯಲ್ಲಿ 33 ವಿಶೇಷ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗಿದೆ.

ಬ್ರಾಂಡ್ ಬೆಂಗಳೂರಿನ ಕಲ್ಪನೆಯು ಕಾಂಗ್ರೆಸ್ ಸರ್ಕಾರದ ಆದ್ಯತೆಯಾಗಿದೆ. ಈ ವರ್ಷ ‘ಬ್ರಾಂಡ್ ಬೆಂಗಳೂರು’ ಯೋಜನೆಯನ್ನು ಬಲಪಡಿಸಲು 1,800 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದರ ಭಾಗವಾಗಿ ಬೆಂಗಳೂರಿಗೆ ವಾರ್ಷಿಕವಾಗಿ ನೀಡಲಾಗುತ್ತಿದ್ದ 3,000 ಕೋಟಿ ರೂ.ಗನ್ನು 7,000 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಅಲ್ಲದೆ, ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್ ಅವರ ಸೇವೆಯನ್ನು ಗೌರವಿಸಲು ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು – ‘ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಮಾಡಲಾಗಿದೆ.

ಬ್ರಾಂಡ್ ಬೆಂಗಳೂರಿನ ಜೊತೆಗೆ ಬಿಯಾಂಡ್ ಬೆಂಗಳೂರು ‘ಕರ್ನಾಟಕದ ಕಾಂಗ್ರೆಸ್ ಸರ್ಕಾರದ ದೃಷ್ಟಿಕೋನವಾಗಿದೆ. ಬಜೆಟ್‌ನಲ್ಲಿ 2025-26 ವರ್ಷಕ್ಕೆ ವಿವಿಧ ನವೀನ ಯೋಜನೆಗಳನ್ನು ರೂಪಿಸಲಾಗಿದೆ. ನೀರಾವರಿ, ಜವಳಿ ಸೇರಿ ಹಲವು ಕ್ಷೇತ್ರಗಳಿಗೆ ಅನುದಾನ ನೀಡಲಾಗಿದೆ. ಜೊತೆಗೆ ಉದ್ಯೋಗ ಸೃಷ್ಟಿಗೂ ಒತ್ತು ನೀಡಲಾಗಿದೆ. ಹಾಗಾಗಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಈ ಬಜೆಟ್‌ನಲ್ಲಿ ನೋಡಬಹುದಾಗಿದೆ.

ಕೊನೆಯದಾಗಿ ನಾನು ಹೇಳಬಯಸುವುದೇನೆಂದರೆ, ನಮ್ಮ ಕಾಂಗ್ರೆಸ್‌ ಪಕ್ಷದ ಮೂಲ ಮಂತ್ರ ಏನೆಂದರೆ, “ಅಭಿವೃದ್ಧಿ… ಅಭಿವೃದ್ಧಿ… ಅಭಿವೃದ್ಧಿ… ಕರ್ನಾಟಕ !”

ರಣದೀಪ್‌ ಸಿಂಗ್‌ ಸುರ್ಜೇವಾಲ, ಪ್ರಧಾನ ಕಾರ್ಯದರ್ಶಿಗಳು, ಎಐಸಿಸಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿಗಳು

LEAVE A REPLY

Please enter your comment!
Please enter your name here