ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೋಲುವುದು ಖಚಿತವಾದ ಮೇಲೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ದೇಶದಲ್ಲಿ ಗೊಂದಲ ಉಂಟುಮಾಡಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ನಡೆದ ‘ಹರ್ ಘರ್ ತಿರಂಗಾ’ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. “ಚುನಾವಣಾ ಆಯೋಗ ದುರ್ಬಳಕೆ ಆಗುತ್ತಿದೆ ಎಂಬ ಆರೋಪಗಳು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕೇಳಿಬರುತ್ತಿವೆ. ಬೆಂಗಳೂರು ಕೇಂದ್ರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಈ ಮೂಲಕ ರಾಷ್ಟ್ರದಲ್ಲಿ ಗೊಂದಲ ಎಬ್ಬಿಸಲು ಕಾಂಗ್ರೆಸ್ ಯತ್ನಿಸುತ್ತಿದೆ,” ಎಂದರು.
ರಾಹುಲ್ ಗಾಂಧಿಗೆ ಕರ್ನಾಟಕದ ಮೇಲೆ ಅತಿಯಾದ ಪ್ರೀತಿ?
“ರಾಹುಲ್ ಗಾಂಧಿಗೆ ಕರ್ನಾಟಕ ವಿಶೇಷ ಪ್ರೀತಿ ಇದೆ. ರಾಜ್ಯವನ್ನು ಕಾಂಗ್ರೆಸ್ ತನ್ನ ಎಟಿಎಂ ಆಗಿ ಉಪಯೋಗಿಸಲು ಹೊರಟಿದೆ. ಬೆಲೆ ಏರಿಕೆ ಮೂಲಕ ಜನರ ಮೇಲೆ ಭಾರ ಹಾಕಲಾಗಿದೆ,” ಎಂದು ವಿಜಯೇಂದ್ರ ಆರೋಪಿಸಿದರು.
“ದೇಶದ್ರೋಹಿಗಳಿಗೆ ಕರ್ನಾಟಕ ಸ್ವರ್ಗವಾಗಿದೆಯೆಂಬಂತೆ ರಾಹುಲ್ ಗಾಂಧಿ ವರ್ತಿಸುತ್ತಿದ್ದಾರೆ. ಈ ರೀತಿ ನಿರಂತರ ಅಪಪ್ರಚಾರದ ವಿರುದ್ಧ ಬಿಜೆಪಿ ಸಜ್ಜಾಗಿದೆ,” ಎಂದ ಅವರು, ಕಾಂಗ್ರೆಸ್ ಪಕ್ಷ ಸಮಾಜದಲ್ಲಿ ವಿಭಜನೆ ಉಂಟುಮಾಡಲು ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತಿದೆ ಎಂದು ಟೀಕಿಸಿದರು.
‘ಮನ್ ಕೀ ಬಾತ್’ ನೋಡುವಲ್ಲಿ ಕರ್ನಾಟಕ ಮುಂದಾಳು
ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮ 33 ಸಾವಿರ ಬೂತ್‌ಗಳಲ್ಲಿ ಪ್ರಸಾರವಾಗಿದ್ದು, ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ ಎಂದು ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ದೇಶದ್ರೋಹಿ ನಿಲುವಿಗೆ ಒಲವು: ಸುರೇಂದ್ರನ್ ವಾಗ್ದಾಳಿ
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇರಳದ ಮಾಜಿ ಬಿಜೆಪಿ ಅಧ್ಯಕ್ಷ ಹಾಗೂ ಹರ್ ಘರ್ ತಿರಂಗಾ ಅಭಿಯಾನದ ದಕ್ಷಿಣ ಭಾರತ ಸಂಯೋಜಕರಾದ ಕೆ. ಸುರೇಂದ್ರನ್, “ರಾಹುಲ್ ಗಾಂಧಿ ಪಾಕ್ ಪರ ನಿಲುವಿಗೆ ಧ್ವನಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಇದೀಗ ಭಾರತ ವಿರೋಧಿ ಪಕ್ಷವಾಗಿ ಪರಿಣಮಿಸಿದೆ,” ಎಂದು ಗುಡುಗಿದರು.
“ರಾಹುಲ್ ಗಾಂಧಿಯವರನ್ನು ನಗರ ನಕ್ಸಲ್‌ಗಳು, ಟುಕ್ಡೇ ಟುಕ್ಡೇ ಗ್ಯಾಂಗ್ ನಿಯಂತ್ರಿಸುತ್ತಿವೆ. ಅವರು ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡುತ್ತಾರೆ. ಚುನಾವಣೆ ಆಯೋಗ, ಸುಪ್ರೀಂ ಕೋರ್ಟ್, ಜಿಎಸ್‌ಟಿ, ಆಧಾರ್ ವಿರುದ್ಧವೂ ಮಾತನಾಡುತ್ತಾರೆ,” ಎಂದು ಅವರು ಟೀಕಿಸಿದರು.
ಈ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಧೀರಜ್ ಮುನಿರಾಜು, ಎಚ್.ಸಿ. ತಮ್ಮೇಶ್ ಗೌಡ, ಮಂಜುಳಾ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಎಸ್. ದತ್ತಾತ್ರಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.