ಬೆಂಗಳೂರು:
ಭ್ರಷ್ಟಾಚಾರದ ವಿರುದ್ಧ ಯಾತ್ರೆ ಹೊರಟಿರುವ ಕಾಂಗ್ರೆಸ್ಸಿನವರ ಬೀರುಗಳಲ್ಲಿ ಭ್ರಷ್ಟಾಚಾರದ ಅಸ್ಥಿಪಂಜರಗಳು ಎಷ್ಟಿವೆ ಎಂದು ಮೊದಲು ಲೆಕ್ಕಹಾಕಿಕೊಳ್ಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಹಳ ಶುದ್ಧಹಸ್ತರು, ಪವಿತ್ರ ಹಸ್ತದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಯಾತ್ರೆ ಹೊರಟಿದ್ದಾರೆ. ಜನಕ್ಕೆ ಗೊತ್ತಿದೆ. ಇದ್ಯಾವುದರಿಂದಲೂ ಪ್ರಯೋಜನವಾಗುವುದಿಲ್ಲ ಎಂದು ಗೊತ್ತಿದೆ. ಇಂಥ ಹಲವಾರು ಸಲಗೆಹಾರರನ್ನು ಪಡೆದು ನಿರೂಪಣೆ ಸೃಷ್ಟಿಸಲು ಹೊರಟಿದ್ದಾರೆ. ಕರ್ನಾಟಕದ ಜನತೆ ಕಾಂಗ್ರೆಸ್ ನ್ನು ಬಹಳ ವರ್ಷಗಳಿಂದ ನೋಡಿದ್ದಾರೆ. ಯಾವ ಯಾವ ಹಗರಣಗಳಾಗಿವೆ ಎಂದು ಅವರಿಗೆ ತಿಳಿದಿದೆ. ನಾವೂ ಜನರ ಮುಂದೆ ಅವರು ಮಾಡಿರುವ ಹಗರಣಗಳನ್ನು ಇಡಬೇಕಾದ ಕಾಲ ಬರುತ್ತಿದೆ ಎಂದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ನಿಯಮವನ್ನು ಏಕೆ ಹಾಕಲಾಗಿಲ್ಲ ಎಂಬ ಪ್ರಶ್ನೆಗೆ ಸಂತೋಷ್ ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಇದ್ದು, ತನಿಖೆಯಾಗುತ್ತಿದೆ. ಶವಪರೀಕ್ಷೆಯ ನಂತರ ಬರುವ ಎಫ್.ಎಸ್.ಎಲ್ ಆಧಾರದ ಮೇಲೆ ವೈಜ್ಞಾನಿಕವಾಗಿ ಏನು ನಡೆಯಿತು ಎಂದು ಗೊತ್ತಾ ಗಲಿದೆ ಎಂದರು.
ಹಸ್ತಕ್ಷೇಪ ಮಾಡಿಲ್ಲ
ಸಿದ್ದರಾಮಯ್ಯ ಅವರು ಜಾರ್ಜ್ ವಿಚಾರದಲ್ಲಿ ವಿಡಿಯೋ ಹಾಗೂ ಮರಣಪತ್ರವೂ ಇತ್ತು. ಆದರೆ ಎಫ್. ಐ.ಆರ್ ನಲ್ಲಿ ಹೆಸರು ಬಂದಿತ್ತಾ? ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಲಿಲ್ಲವೇ? ಕೋರ್ಟಿನಿಂದ ಆದೇಶ ಬಂದ ನಂತರ ಎಫ್.ಐ.ಆರ್.ಆಯಿತು. ಅವರ ಮನೆಯವರು ಕೋರ್ಟಿಗೆ ಹೋಗ ಬೇಕಾಯಿತು ಎಫ್.ಐ.ಆರ್. ಆಗಲು. ಆದರೆ ನಾವು ದೂರಿನ ಮೇಲೆ ಎಫ್.ಐ.ಆರ್. ದಾಖಲಿಸಿ ತನಿಖೆ ಮಾಡಿಸುತ್ತಿದ್ದೇವೆ ಎಂದರು. ಈ ಪ್ರಕರಣದ ತನಿಖೆಯ ಆಧಾರದ ಮೇಲೆ ಮುಂದಿನ ಸೆಕ್ಷನ್ ಗಳನ್ನು ಹಾಕಲಾಗುವುದು. ತನಿಖೆಯಾಗಲು ಬಿಡಿ. ಯಾವಾಗ ಯಾವ ಸೆಕ್ಷನ್ ಹಾಕಬೇಕು ಎನ್ನುವುದು ಕಾನೂನು ಬದ್ಧವಾಗಿ ಆಗುತ್ತದೆ. ನಾವು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದರು.
ಕಾನೂನಿನ ಪ್ರಕಾರ ತನಿಖೆ
ಕಾನೂನಿದೆ, ತನಿಖೆಯಾಗುತ್ತದೆ. ಚಾರ್ಚ್ ಶೀಟ್ ಆದ ಮೇಲೆ ಕೋರ್ಟಿನಲ್ಲಿ ಸರಿ ಇದೆಯೇ ಎಂದು ಮತ್ತೊಮ್ಮೆ ವಿಶ್ಲೇಷಣೆ ಆಗುತ್ತದೆ. ನಮ್ಮಲ್ಲಿರುವ ವ್ಯವಸ್ಥೆ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ.ಪ್ರಾಥಮಿಕ ತನಿಖೆಯಾದ ನಂತರ ಉನ್ನತ ಮಟ್ಟದ ತನಿಖೆ ವಹಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.