ಬೆಂಗಳೂರು: ಪರಸ್ಪರ ಸಮ್ಮತಿಯ ಆಧಾರದ ಮೇಲೆ ನಡೆದ ಲೈಂಗಿಕ ಕ್ರಿಯೆಯನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ, ಡೇಟಿಂಗ್ ಆಪ್ನಲ್ಲಿ ಪರಿಚಯವಾದ ಯುವಕನ ವಿರುದ್ಧ ಮಹಿಳೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತೀರ್ಪಿನಲ್ಲಿ ಸ್ಪಷ್ಟಪಡಿಸಿ
“ಪರಸ್ಪರ ಒಪ್ಪಿಗೆಯಿಂದ ಆರಂಭವಾದ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅದು ಅಪರಾಧವಲ್ಲ. ಕಾನೂನಿನಲ್ಲಿ ನಿರ್ದಿಷ್ಟವಾಗಿ ಹೇಳಿರುವ ಸಂದರ್ಭಗಳನ್ನು ಹೊರತುಪಡಿಸಿ, ಅಂತಹ ಸಂಬಂಧವನ್ನು ಕ್ರಿಮಿನಲ್ ಕಾನೂನಿನಡಿ ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ,” ಹೇಳಿದರು.
ಈ ತೀರ್ಪು ಸಾಂಪ್ರಸ್ ಆಂಥೋಣಿ ಎಂಬ 23 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನೀಡಲಾಯಿತು. ಯುವಕನ ವಿರುದ್ಧ ಮಹಿಳೆ ನೀಡಿದ್ದ ಅತ್ಯಾಚಾರ ಎಫ್ಐಆರ್ ರದ್ದುಪಡಿಸುವಂತೆ ಅವರು ಹೈಕೋರ್ಟ್ಗೆ ಮನವಿ ಮಾಡಿದ್ದರು.
ದೂರಿನ ಪ್ರಕಾರ, ಮಹಿಳೆ ಮತ್ತು ಆಂಥೋಣಿ ಇಬ್ಬರು ಡೇಟಿಂಗ್ ಆಪ್ನಲ್ಲಿ ಪರಿಚಿತರಾದರು, ನಂತರ ವಾಟ್ಸಾಪ್ ಚಾಟಿಂಗ್, ಕಾಲ್ ಹಾಗೂ ಫೋಟೋ–ವೀಡಿಯೊ ವಿನಿಮಯ ನಡೆಸುತ್ತಿದ್ದರು. ಬಳಿಕ 2024ರ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಇಬ್ಬರೂ ಭೇಟಿಯಾಗಿ, ರೆಸ್ಟೋರೆಂಟ್ನಲ್ಲಿ ಊಟ ಮಾಡಿದ ನಂತರ ಯುವಕ ಆಕೆಯನ್ನು ಓಯೋ ರೂಮ್ಗೆ ಕರೆದೊಯ್ದಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು.
ಮರುದಿನ ಯುವಕ ಆಕೆಯನ್ನು ಅಪಾರ್ಟ್ಮೆಂಟ್ಗೆ ಬಿಡುತ್ತಿದ್ದಂತೆ, ಮಹಿಳೆ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಕೊಣನಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದರು. ಲೈಂಗಿಕ ಕ್ರಿಯೆಯ ವೇಳೆ ಒಪ್ಪಿಗೆ ನೀಡದಿದ್ದರೂ ಯುವಕ ಬಲವಂತವಾಗಿ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದರು.
ಆದರೆ, ನ್ಯಾಯಾಲಯವು ಇಬ್ಬರ ನಡುವಿನ ಸಂಬಂಧ ಪರಸ್ಪರ ಸಮ್ಮತಿಯ ಆಧಾರದ ಮೇಲೆ ನಡೆದದ್ದು ಸ್ಪಷ್ಟವಾಗಿದೆ ಎಂದು ವೀಕ್ಷಣೆ ಮಾಡಿತು. ದೀರ್ಘಕಾಲದ ಸಂವಹನ, ಭೇಟಿಗಳು ಹಾಗೂ ವಿನಿಮಯವಾದ ಸಂದೇಶಗಳು ಎರಡೂ ಪಾರ್ಶ್ವಗಳ ಒಪ್ಪಿಗೆಗೆ ಸಾಕ್ಷಿ ಎಂದು ಪೀಠ ಅಭಿಪ್ರಾಯಪಟ್ಟಿತು.
ಹೀಗಾಗಿ, ಹೈಕೋರ್ಟ್ ಆರೋಪಿಯ ವಿರುದ್ಧದ ಎಫ್ಐಆರ್ ರದ್ದುಗೊಳಿಸಿ, “ಪರಸ್ಪರ ಒಪ್ಪಿಗೆಯಿಂದ ನಡೆದ ಸಂಬಂಧ ನಿರಾಸೆಯಲ್ಲಿ ಅಂತ್ಯವಾದರೂ ಅದನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ” ಎಂದು ತೀರ್ಪು ನೀಡಿತು.
ಈ ತೀರ್ಪು, ಸಮ್ಮತಿಯ ಆಧಾರದ ಮೇಲೆ ನಡೆದ ವೈಯಕ್ತಿಕ ಸಂಬಂಧಗಳನ್ನು ಕ್ರಿಮಿನಲ್ ಕಾನೂನಿನಡಿ ಅಪರಾಧವೆಂದು ಪರಿಗಣಿಸುವುದಿಲ್ಲ ಎಂಬ ತತ್ವವನ್ನು ಪುನಃ ದೃಢಪಡಿಸಿದೆ ಮತ್ತು ಡೇಟಿಂಗ್ ಆಪ್ ಮೂಲಕ ನಿರ್ಮಾಣವಾಗುವ ಸಂಬಂಧಗಳ ಕುರಿತು ಕಾನೂನು ಸ್ಪಷ್ಟತೆ ನೀಡಿದೆ.
