ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಸಚಿವ ಅಶ್ವತ್ಥನಾರಾಯಣ ಸಭೆ
ಬೆಂಗಳೂರು:
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮತ್ತೀಕೆರೆಯಲ್ಲಿ ಹೈಟೆಕ್ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಅಲ್ಲಿ ಕೆಪಿಟಿಸಿಎಲ್ ತನ್ನ ಅಧೀನದಲ್ಲಿರುವ 10 ಸಾವಿರ ಚದರ ಅಡಿ ಜಾಗವನ್ನು ಆದಷ್ಟು ಬೇಗನೆ ಬಿಬಿಎಂಪಿಗೆ ಹಸ್ತಾಂತರಿಸಬೇಕು. ಇದಕ್ಕೆ ಬದಲಾಗಿ ಕೆಪಿಟಿಸಿಎಲ್ ಸಂಸ್ಥೆಗೆ ಮಲ್ಲೇಶ್ವರಂನ ಟಿಟಿಡಿ ಸಮೀಪವಿರುವ ಬಿಬಿಎಂಪಿಯ ಜಾಗವನ್ನು ಬಿಟ್ಟುಕೊಡಲಾಗುವುದು ಎಂದು ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಮತ್ತು ಕೆಪಿಟಿಸಿಎಲ್, ಜಲಮಂಡಲಿ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಅವರು ಈ ಸೂಚನೆ ನೀಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಮೇಲಿರುವ ವಿದ್ಯುತ್ ಪರಿವರ್ತಕಗಳನ್ನು ಹೈರೈಸ್ಡ್-ಟ್ರಾನ್ಸ್ ಫಾರ್ಮರ್ ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈಗಾಗಲೇ 190 ಪರಿವರ್ತಕಗಳನ್ನು ಹೀಗೆ ಮಾಡಲಾಗಿದ್ದು, ಇನ್ನೂ 120 ಪರಿವರ್ತಕಗಳ ಕೆಲಸ ಬಾಕಿ ಇದೆ. ಇದನ್ನೆಲ್ಲ ಏಪ್ರಿಲ್ ಒಳಗೆ ಮುಗಿಸಿ, ಪಾದಚಾರಿಗಳ ಸುಗಮ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ನಿರ್ದೇಶಿಸಿದರು.
ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆಯ ಸೌಂದರ್ಯೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯ ಮುಕ್ತಾಯಕ್ಕೂ ಏಪ್ರಿಲ್ ತಿಂಗಳ ಗಡುವು ನೀಡಿದರು.
ಇದಲ್ಲದೆ, ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಡಬ್ಲ್ಯುಎಸ್ಎಸ್ಬಿ ಹಳೆಯ ಕೊಳವೆಗಳನ್ನು ಬದಲಾಯಿಸುತ್ತಿದೆ. ಜೊತೆಗೆ, ಕೊಳವೆ ತೆಗೆಯಲು ಅಗೆಯುವ ರಸ್ತೆಗಳನ್ನು ಸರಿಯಾಗಿ ದುರಸ್ತಿ ಮಾಡಿ, ವಾಹನಗಳ ಮತ್ತು ಜನರ ಸುರಕ್ಷಿತ ಓಡಾಟ ಸಾಧ್ಯವಾಗುವಂತೆ ಮಾಡಬೇಕು ಎಂದು ಅಶ್ವತ್ಥನಾರಾಯಣ ಹೇಳಿದರು.
ವಾಹನ ಸವಾರರ ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ಪಾದಚಾರಿ ಮಾರ್ಗಗಳನ್ನು ಸುಧಾರಣೆ ಮಾಡುವ ಜತೆ BEL ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು.
— Dr. Ashwathnarayan C. N. (@drashwathcn) February 17, 2022
ಇದರ ಜತೆ ಒಳಚರಂಡಿ ಕಾಮಗಾರಿ, ಸ್ಯಾಂಕಿ ಕೆರೆಯ ಕಾಮಗಾರಿಗಳನ್ನು ಪರಿಶೀಲಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ತಿಳಿಸಲಾಗಿದೆ.
ಬೆಸ್ಕಾಂ ವತಿಯಿಂದ ಮಲ್ಲೇಶ್ವರಂ ಮತ್ತು ವಯ್ಯಾಲಿಕಾವಲಿನಲ್ಲಿ 101 ಕಿ.ಮೀ. ಉದ್ದದಷ್ಟು ಕೇಬಲ್ಲುಗಳನ್ನು ನೆಲದೊಳಗೆ ಅಳವಡಿಸಲಾಗುತ್ತಿದೆ. ಈ ಪೈಕಿ 96 ಕಿ.ಮೀ.ಉದ್ದದಷ್ಟು ಕೇಬಲ್ಲನ್ನು ಈಗಾಗಲೇ ಹಾಕಿರುವುದು ತೃಪ್ತಿದಾಯಕವಾಗಿದೆ. ಉಳಿದ 5 ಕಿ.ಮೀ. ಉದ್ದದಲ್ಲಿ ಏಪ್ರಿಲ್ ಕೊನೆಯ ಹೊತ್ತಿಗೆ ಈ ಕಾಮಗಾರಿ ಮುಗಿಸಬೇಕೆಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ದೀಪಕ್ ಮುಂತಾದವರು ಇದ್ದರು.