ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿ
ಬೆಳಗಾವಿ:
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ ನಲ್ಲಿ ವಿಧಾನಮಂಡಳ ಚಳಿಗಾಲ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಧಿವೇಶನದ ಪೂರ್ವಸಿದ್ಧತೆಯನ್ನು ಮಂಗಳವಾರ(ನ.7) ಪರಿಶೀಲಿಸಿದರು.
ಸುವರ್ಣ ವಿಧಾನಸೌಧವನ್ನು ಬೆಂಗಳೂರಿನ ವಿಧಾನಸೌಧದ ಮಾದರಿಯಲ್ಲಿ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆರಂಭದಲ್ಲಿ ಸುವರ್ಣ ವಿಧಾನಸೌಧ ಕಟ್ಟಡವನ್ನು ವೀಕ್ಷಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಪಶ್ಚಿಮ ಪ್ರವೇಶದ್ವಾರದ ಕೆಲವು ಕಡೆಗಳಲ್ಲಿ ಬಣ್ಣ ಮಾಸಿರುವುದು ಹಾಗೂ ಕಲೆಗಳಿರುವುದನ್ನು ಸರಿಪಡಿಸಲು ಸೂಚಿಸಿದರಲ್ಲದೇ ವರ್ಷವಿಡೀ ಸುವರ್ಣ ಸೌಧದ ಉತ್ತಮ ನಿರ್ವಹಣೆಗೆ ಸಂಬಂಧಿಸಿದಂತೆ ಶಾಶ್ವತ ಯೋಜನೆ ರೂಪಿಸಲಾಗುವುದು.
ಇದಾದ ಬಳಿಕ ವಿಧಾನಸಭೆ ಸಭಾಂಗಣ, ಸಭಾಧ್ಯಕ್ಷರ ಕೊಠಡಿಗಳನ್ನು ಪರಿಶೀಲಿಸಿದರು.
ಧ್ವನಿವರ್ಧಕ, ಸ್ವಚ್ಛತೆ, ಆಸನ ವ್ಯವಸ್ಥೆ, ವಿದ್ಯುಚ್ಛಕ್ತಿ, ಅಂತರ್ಜಾಲ ಸಂಪರ್ಕ, ಟಿವಿ ಪರದೆ, ಕಂಪ್ಯೂಟರ್ ಸೇರಿದಂತೆ ಅಧಿವೇಶನ ಸಂದರ್ಭದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ವಿಧಾನಸಭೆ ಸಭಾಂಗಣದಲ್ಲಿ ದೊಡ್ಡ ಪರದೆಯ ಟಿವಿ ಅಳವಡಿಸಬೇಕು. ಸಭಾಧ್ಯಕ್ಷರ ಕುರ್ಚಿ ಎದುರು ಎಲ್ಲ ಶಾಸಕರ ಹೆಸರು ಹಾಗೂ ಆಸನ ಸಂಖ್ಯೆಯ ಮಾಹಿತಿಯನ್ನು ಪ್ರದರ್ಶಿಸುವ ಚಾರ್ಟ್ ಅಳವಡಿಸಬೇಕು ಎಂದು ತಿಳಿಸಿದರು.
ನಂತರ ಸೆಂಟ್ರಲ್ ಹಾಲ್, ಪರಿಷತ್ ಸಭಾಂಗಣ, ಸಭಾಪತಿ ಕೊಠಡಿ. ವಿರೋಧ ಪಕ್ಷದ ಮೊಗಸಾಲೆ, ಮಂತ್ರಿಗಳ ಮೊಗಸಾಲೆ, ಕ್ಯಾಬಿನೆಟ್ ಹಾಲ್, ಆಡಿಟೋರಿಯಂ ಮತ್ತಿತರ ಸ್ಥಳಗಳನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ,ಪೊಲೀಸ್ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ವಿಧಾನಸಭೆ ಕಾರ್ಯದರ್ಶಿವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸೊಬರದ ಹಾಗೂ ಇತರೆ ಅಧಿಕಾರಿಗಳು, ಸುವರ್ಣ ವಿಧಾನಸೌಧದ ನಿರ್ವಹಣೆಯ ಕುರಿತು ವಿವರಿಸಿದರು.
ಸುದ್ದಿ ಮೂಲ: ಕರ್ನಾಟಕ ವಾರ್ತೆ