
ಬೆಂಗಳೂರು:
ಗುತ್ತಿಗೆದಾರರ ಶೇಕಡಾ 60ರಿಂದ 70ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ತನಿಖೆ ಪೆಂಡಿಂಗ್ ಇದ್ದರೂ ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ಗುತ್ತಿಗೆದಾರರಿಗೆ ಸಹಾಯ ಆಗಬೇಕು ಎಂದು ಆದೇಶ ನೀಡಿದ್ದೇವೆ. ಬಿಲ್ ಪಾವತಿ ವಿಚಾರದಲ್ಲಿ ಕೆಂಪಣ್ಣ ಅವರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ‘ನಮ್ಮ ಪರಿಸ್ಥಿತಿ ರೈತರಿಗಿಂತ ಶೋಚನೀಯವಾಗಿದೆ. ತನಿಖೆ ಪಕ್ಕಕ್ಕಿಟ್ಟು ಬಿಲ್ ಪಾವತಿ ಮಾಡಲಿ’ ಎಂದು ಸರ್ಕಾರಕ್ಕೆ ಮನವಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ: “ಬಿಲ್ ಪಾವತಿ ವಿಚಾರದಲ್ಲಿ ಕೆಂಪಣ್ಣ ಅವರು ಆತಂಕ ಪಡುವ ಅಗತ್ಯವಿಲ್ಲ. ಏನಾದರೂ ಇದ್ದರೆ ಬಂದು ನಮ್ಮ ಬಳಿ ಮಾತನಾಡಲಿ. ನಾವು ನ್ಯಾಯ ಒದಗಿಸುತ್ತೇವೆ. ಕೆಂಪಣ್ಣ ಅವರ ಮನವಿ ಮೇರೆಗೆ ನಾವು ತನಿಖೆ ಪಕ್ಕಕ್ಕಿಟ್ಟು, ಆದ್ಯತೆ ಮೇರೆಗೆ ಕಾಮಗಾರಿಗಳ 60-70% ಹಣ ಬಿಡುಗಡೆ ಮಾಡಿದ್ದೇವೆ. ಬಿಲ್ ಪಾವತಿ ಸಮಯದಲ್ಲಿ ಜಿಎಸ್ ಟಿ ಕೂಡ ಪಾವತಿ ಮಾಡಬೇಕು ಹೀಗಾಗಿ ತನಿಖೆ ವರದಿ ಬರುವ ಮುನ್ನವೇ ನಾವು ಸುಮಾರು ಮುಕ್ಕಾಲು ಭಾಗ ಹಣ ಬಿಡುಗಡೆ ಮಾಡಿದ್ದೇವೆ” ಎಂದು ತಿಳಿಸಿದರು.
ಕೆಂಪಣ್ಣ ಸಚಿವರ ವಿರುದ್ಧ ಆರೋಪ ಮಾಡುತ್ತಿಲ್ಲ ಕೇವಲ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಸರಿಯಾದ ತನಿಖೆ ನಡೆಯುವವರೆಗೂ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದರು.