Home ಬೆಂಗಳೂರು ನಗರ ಎತ್ತಿನಹೊಳೆ ಯೋಜನೆಯಿಂದ ಗುತ್ತಿಗೆದಾರರ ಜೇಬು ತುಂಬಿಸಲಾಗುತ್ತದೆಯೇ?

ಎತ್ತಿನಹೊಳೆ ಯೋಜನೆಯಿಂದ ಗುತ್ತಿಗೆದಾರರ ಜೇಬು ತುಂಬಿಸಲಾಗುತ್ತದೆಯೇ?

57
0
Contractor's pocket filled with yettinahole project questions former Chief Minister HD Kumaraswamy

ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ತರುವ ಯೋಜನೆಯ ಕಥೆ ಬಿಡಿಸಿಟ್ಟ ಮಾಜಿ ಮುಖ್ಯಮಂತ್ರಿ

ಬೆಂಗಳೂರು:

ಎತ್ತಿನಹೊಳೆ ಯೋಜನೆಯ ಮೂಲಕ ಬರಪೀಡಿತ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ನೀರು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲವಾದರೂ ಗುತ್ತಿಗೆದಾರರ ಜೇಬು ತುಂಬಿಸಲಾಗುತ್ತಿದೆಯೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಎಲ್ಲ ವಿವರಗಳನ್ನು, ಕಷ್ಟ ನಷ್ಟಗಳನ್ನು ಸವಿಸ್ತಾರವಾಗಿ ಹೇಳಿದರು.

ಪ್ರಸಕ್ತ ಬಜೆಟ್ ನಲ್ಲಿ ಈ ಯೋಜನೆಗೆ 3000 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಹಾಗೆ ನೋಡಿದರೆ ಮೊದಲಿಗೆ ಇವೆರಡೂ ಜಿಲ್ಲೆಗಳಿಗೆ ನೀರು ತರುವ ನಿರ್ಧಾರ ಮಾಡಿದ್ದು 2011-12ರಲ್ಲಿ. ಆಗ ಜಲ ಸಂಪನ್ಮೂಲ ಸಚಿವರಾಗಿದ್ದವರು ಈಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು. ಆದರೆ ಎತ್ತಿನಹೊಳೆಯ ನೀರಿನ ಮೂಲ ಯಾವುದು? ನೀರಿನ ಲಭ್ಯತೆಯ ಖಾತರಿ ಇಲ್ಲದೆ ಲೋಕಸಭೆ ಚುನಾವಣೆ ಘೋಷಣೆ ಆದಾಗ ಚಿಕ್ಕಬಳ್ಳಾಪುರದಲ್ಲಿ ತರಾತುರಿಯಲ್ಲಿ ಕಾರ್ಯಕ್ರಮ ಮಾಡಿ ಶಂಕುಸ್ಥಾಪನೆ ಮಾಡಲಾಯಿತು.ಈಗ ನೀರು ಯಾವಾಗ ಬರುತ್ತದೆ ಎಂದು ಅವರು ಕೇಳಿದರು.

ನೇತ್ರಾವತಿ ನದಿಯಿಂದ ಮೂರು ಹಂತಗಳಲ್ಲಿ ನೀರನ್ನು ಬರಪೀಡಿತ ಜಿಲ್ಲೆಗಳಿಗೆ 24 ಟಿಎಂಸಿ ನೀರನ್ನು ಹರಿಸುವ ಈ ಯೋಜನೆಗೆ 2013ರಲ್ಲಿ 8,323 ಕೋಟಿ, 2014ರಲ್ಲಿ 12,912ಕೋಟಿಗೆ ಎಸ್ಟಿಮೇಟ್ ಮಾಡಲಾಯಿತು. ಆದರೆ ಹತ್ತು ವರ್ಷ ಆದರೂ ಯೋಜನೆ ಇನ್ನೂ ಆಗುತ್ತಲೇ ಇದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇಷ್ಟು ದಿನವಾದರೂ ಕೇವಲ ಲೈನ್ ಎಸ್ಟಿಮೇಟ್ ಮೂಲಕವೇ ಕಾಮಗಾರಿ ಮಾಡಲಾಗುತ್ತಿದೆ. ಇಷ್ಟಾದರೂ ಇಂದು ಹೊಸದಾಗಿ 3000 ಕೋಟಿ ಹಣ ಇಟ್ಟಿದ್ದು, ಅದು ಬಳಕೆ ಆಗಬೇಕು ಎನ್ನುವುದು ನನ್ನ ಆಶಯ ಎಂದರು ಅವರು.

ತುಮಕೂರಿನ ದೇವರಾಯನ ದುರ್ಗದಲ್ಲಿ 10 ಟಿಎಂಸಿ ನೀರು ಸಂಗ್ರಹಿಸಲು ಜಲಾಶಯ ಕಟ್ಟಬೇಕು ಅಂತ ಹೊರಟ ಸರಕಾರ, ಕ್ರಮೇಣ ಅದನ್ನು ಕೈಬಿಟ್ಟು ಮಧುಗಿರಿಯ ಬೈರಗೊಂಡ್ಲು ಬಳಿ 5.7 ಟಿಎಂಸಿ ಜಲಾಶಯ ಕಟ್ಟಲು ಹೊರಡುತ್ತಾರೆ. ಆದರೆ, ಅಲ್ಲಿ ಅರಣ್ಯ ಪ್ರದೇಶ ಮುಳುಗಡೆ ಆಗುತ್ತದೆ ಎನ್ನುವ ಕಾರಣಕ್ಕೆ ಆ ಜಲಾಶಯದ ನೀರು ಸಂಗ್ರಹಣೆ ಪ್ರಮಾಣವನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಹೀಗಾದರೆ ಹೇಗೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಅಲ್ಲಿ ಭೂ ಸ್ವಾಧೀನ ದೊಡ್ಡ ಬಿಕ್ಕಟ್ಟಾಗಿದೆ. ದೊಡ್ಡಬಳ್ಳಾಪುರದಲ್ಲಿ ಏಕೆರೆಗೆ 32 ಲಕ್ಷ ಬೇಕೆಂದು ರೈತರು ಕೇಳುತ್ತಿದ್ದಾರೆ. ಕೊರಟಗೆರೆಗೆ 8 ಲಕ್ಷ ಗೈಡ್ ಲೈನ್ಸ್ ವ್ಯಾಲ್ಯೂ ನಿಗದಿ ಮಾಡಿದ್ದು, ಅವರೂ ಈಗ 32 ಲಕ್ಷ ರೂ. ಕೇಳುತ್ತಿದ್ದಾರೆ. ಹೀಗೆ ವೆಚ್ಚ ಏರುತ್ತಾ ಹೋಗಿ ಈಗ 25ಸಾವಿರ ಕೋಟಿ ಮರು ಅಂದಾಜಿಗೆ ಬಂದು ನಿಂತಿದೆ ಎಂದು ಯೋಜನೆಯ ಕಗ್ಗಂಟುಗಳನ್ನು ಮಾಜಿ ಮುಖ್ಯಮಂತ್ರಿಗಳು ಬಿಡಿಸಿಟ್ಟರು.

ಒಂದೇ ವರ್ಷದಲ್ಲಿ ನೀರು ಕೊಡ್ತೀವಿ ಅಂತ ಹೇಳಿದ್ದರು:

ಚಿಕ್ಕಬಳ್ಳಾಪುರದಲ್ಲಿ ಅಡಿಗಲ್ಲು ಹಾಕಿದಾಗ ಒಂದೇ ವರ್ಷದಲ್ಲಿ ನೀರು ಕೊದಲಾಗುವುದು ಎಂದು ಸರಕಾರ ಹೇಳಿತ್ತು. ಅವತ್ತೇ ನಾನು ಕೋಲಾರದಲ್ಲಿ ಹೇಳಿದ್ದೆ, ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಅಂತ. ಆಗ ನನಗೆ ಸ್ವಲ್ಪ ಕೂದಲಿತ್ತು. ಹೇ.. ಅವನಿಗೆ ಕೂದಲೇ ಇಲ್ಲ, ಅವನೆಲ್ಲಿ ತಲೆ ಬೋಳಿಸ್ಕೋತಾನೆ ಅಂದಿದ್ರು, ನನಗೆ ನೆನಪಿದೆ ಎಂದು ಎತ್ತಿನಹೊಳೆಯ ಹಣೆಬರಹವನ್ನು ಸದನದ ಗಮನಕ್ಕೆ ತಂದರು ಕುಮಾರಸ್ವಾಮಿ ಅವರು.

ಓಪನ್ ಕೆನಾಲ್ ಗ್ರಾವಿಟಿಯಲ್ಲಿ, 15 ಡೆಲಿವರಿ ಪಾಯಿಂಟ್ ಮೂಲಕ ತುಮಕೂರು, ರಾಮನಗರ, ಚಿಕ್ಕಮಗಳೂರು, ಹಾಸನ ಜಿಲ್ಲೆಗೆ ನೀರು ಕೊಡೋದಕ್ಕೆ ಪಾಯಿಂಟ್ ಗಾಳನ್ನು ಮಾಡಿದ್ದಾರೆ. ಇಷ್ಟಕ್ಕೆ 14 ಟಿಎಂಸಿ ನೀರು ಅಗತ್ಯ. ಆದರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 10 ಟಿಎಂಸಿ ನೀರು ಬೇಕು. ಅಷ್ಟು ನೀರನ್ನು ಎಲ್ಲಿಂದ ತರುತ್ತಾರೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here