ಬೆಂಗಳೂರು:
ಕರ್ನಾಟಕ ಶಾಂತಿಪ್ರಿಯ ರಾಜ್ಯ. ಶಾಂತಿ ಕದಡುವಂತಹ ಕ್ರಮಗಳನ್ನು ಬಿಟ್ಟು ಸೌಹಾರ್ದತೆ ಕಾಪಾಡುವುದು ಒಳ್ಳೆಯದು ಎಂದು ಎಲ್ಲಾ ಸಂಘಟನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಅವರು ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದೇಶವ್ಯಾಪ್ತಿ ಶುಕ್ರವಾರ ನಡೆದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ ಕಾಪಾಡಲು ಕ್ರಮ ವಹಿಸಲಾಗಿದೆ. ಇಂದು ಡಿಜಿಪಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಗೃಹ ಇಲಾಖೆ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಲಾಗಿದ್ದು, ಕರ್ನಾಟಕದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಶಾಂತಿ ಸೌಹಾರ್ದತೆಯನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಲು ಪ್ರತಿಯೊಂದು ಪೊಲೀಸ್ ಠಾಣೆಗೆ ಸೂಚನೆಯನ್ನು ನೀಡಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ಸಂಬಂಧಿಸಿದವರೊಂದಿಗೆ ಮಾತನಾಡಿ ಕೆ.ಎಸ್.ಆರ್.ಪಿ ತುಕಡಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಬೇಕು ಮತ್ತು ಹಿರಿಯ ಅಧಿಕಾರಿಗಳು ಈ ಬಗ್ಗೆ ಜವಾಬ್ದಾರಿಯನ್ನು ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಸಂಪೂರ್ಣ ಶಾಂತಿ ಸುವ್ಯವಸ್ಥೆಯ ಜೊತೆಗೆ ಕಾನೂನು ಸುವ್ಯವಸ್ಥೆಯ ನೆಲಸಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
ನಿರೀಕ್ಷೆಯಂತೆ ಭಾಜಪ ಅಭ್ಯರ್ಥಿಗಳ ಗೆಲುವು:
ಪಕ್ಷದ ನಿರೀಕ್ಷೆಯಂತೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ರಾಜ್ಯಸಭೆಗೆ ಆರಿಸಿಬರುತ್ತಿದ್ದಾರೆ. ನಮ್ಮ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಶಕ್ತಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಮಾರ್ಗದರ್ಶನ, ನಳಿನ್ ಕುಮಾರ್ ಕಟೀಲ್ ಅವರ ಸಹಕಾರದಿಂದ, ಒಗ್ಗಟ್ಟಾಗಿ ಶ್ರಮಿಸಿದ ಫಲದಿಂದ ಈ ಜಯ ಸಾಧಿಸಲು ಸಾಧ್ಯವಾಗಿದೆ. ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಗುವುದು.
ಕೋವಿಡ್: ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಪರಿಸ್ಥಿತಿಯನ್ನು ಮೈಕ್ರೋ ಮಟ್ಟದಲ್ಲಿ ಗಮನಿಸುತ್ತಿದ್ದಾರೆ. ಪ್ರತಿ ಪಿಹೆಚ್‍ಸಿ ಕೇಂದ್ರದಲ್ಲಿ ಗಮನಿಸುತ್ತಿದ್ದಾರೆ. ಹಿಂದಿನ ಅನುಭವದ ಆಧಾರದ ಮೇಲೆ ಪರಿಸ್ಥಿತಿಯನ್ನು ಪ್ರಾರಂಭದಲ್ಲಿಯೇ ನಿಯಂತ್ರಿಸುವ ವಿಶ್ವಾಸವಿದೆ. ಬೂಸ್ಟರ್ ಡೋಸ್ ಹೆಚ್ಚು ನೀಡಲು ಮತ್ತೊಂದು ಅಭಿಯಾನವನ್ನು ಕೈಗೊಳ್ಳಲಾಗುವುದು. ಅಭಿಯಾನದಲ್ಲಿ ಸಂಘಸಂಸ್ಥೆಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು. ಕೋವಿಡ್ ಸೂಕ್ತ ನಡವಳಿಕೆಯನ್ನು ಎಲ್ಲರೂ ಪಾಲಿಸಬೇಕು. ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಿಂದ ಆಗಮಿಸುವವರ ಮೇಲೆಯೂ ನಿಗಾ ವಹಿಸಲಾಗುವುದು. ಲಸಿಕೆಗಳನ್ನು ಉಚಿತವಾಗಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕು ಎಂದರು.