ಬೆಂಗಳೂರು, ಸೆಪ್ಟೆಂಬರ್ 13: ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ, ಆನ್‌ಲೈನ್ ವಂಚನೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕ ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ಬೆಂಗಳೂರಿನಲ್ಲಿ ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ಪ್ರಾರಂಭಗೊಂಡಿದೆ.
ಡಿಐಜಿ ಪ್ರಣಬ್ ಮೋಹಂತಿ ಅವರನ್ನು ಕಮಾಂಡ್ ಸೆಂಟರ್‌ನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಸೈಬರ್ ಅಪರಾಧ ನಿಯಂತ್ರಣಕ್ಕಾಗಿ ಈ ಕೇಂದ್ರದಲ್ಲಿ ನಾಲ್ಕು ವಿಶೇಷ ವಿಂಗ್‌ಗಳು ಕಾರ್ಯನಿರ್ವಹಿಸಲಿವೆ.

ಸೈಬರ್ ಕಮಾಂಡ್ ಸೆಂಟರ್‌ನ ನಾಲ್ಕು ಪ್ರಮುಖ ವಿಭಾಗಗಳು:
- ಸೈಬರ್ ಕ್ರೈಮ್ ವಿಂಗ್ – ದೂರುಗಳನ್ನು ದಾಖಲಿಸಿ, ತನಿಖೆ ನಡೆಸಿ, ವಂಚನೆ ಹಾಗೂ ಹ್ಯಾಕಿಂಗ್ ಪ್ರಕರಣಗಳನ್ನು ಪತ್ತೆ ಮಾಡುವುದು.
- ಸೈಬರ್ ಸೆಕ್ಯೂರಿಟಿ ವಿಂಗ್ – ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣ ಹಾಗೂ ಸಾಫ್ಟ್‌ವೇರ್ ಹ್ಯಾಕಿಂಗ್ ತಡೆಗಟ್ಟುವುದು.
- ಐಡಿಟಿಯು ವಿಂಗ್ (ಮಾಹಿತಿ, ಪತ್ತೆಹಚ್ಚುವಿಕೆ, ಟ್ರ್ಯಾಕಿಂಗ್ ಘಟಕ) – ಸೈಬರ್ ಅಪರಾಧಿಗಳ ಸ್ಥಳ ಪತ್ತೆ, ಐಪಿ ಅಡ್ರೆಸ್ ಟ್ರ್ಯಾಕ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಸಂಗ್ರಹಿಸುವುದು.
- ತರಬೇತಿ ಮತ್ತು ಜಾಗೃತಿ ವಿಂಗ್ – ಅಧಿಕಾರಿಗಳಿಗೆ ತಾಂತ್ರಿಕ ತರಬೇತಿ, ಹೊಸ ತಂತ್ರಜ್ಞಾನ ಪರಿಚಯ ಹಾಗೂ ಸಾರ್ವಜನಿಕ-ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ಅರಿವು ಮೂಡಿಸುವುದು.

ಪ್ರಸ್ತುತ ಬೆಂಗಳೂರಿನಲ್ಲಿ 45 ಸೈಬರ್ ಠಾಣೆಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಮಟ್ಟದ ಪ್ರಕರಣಗಳನ್ನು ಎಸ್‌ಪಿಗಳ ಅಧೀನದಲ್ಲಿ ತನಿಖೆ ಮಾಡಲಾಗುತ್ತದೆ. ಈ ಹಿಂದೆ ಎಸ್‌ಸಿಆರ್ವಿ (Special Cybercrime Response Unit) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಘಟಕವನ್ನು ಈಗ ಇನ್ಫರ್ಮೇಷನ್ ಸೆಕ್ಯೂರಿಟಿ ವಿಂಗ್ ಆಗಿ ಅಭಿವೃದ್ಧಿಪಡಿಸಲಾಗಿದೆ.
ರಾಜ್ಯದಲ್ಲಿ ಪ್ರಸ್ತುತ 16,000ಕ್ಕೂ ಹೆಚ್ಚು ಬಾಕಿ ಸೈಬರ್ ಪ್ರಕರಣಗಳು ದಾಖಲಾಗಿದ್ದು, ಪ್ರತಿದಿನವೂ ಹೊಸ ದೂರುಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾರಂಭವಾದ ಸೈಬರ್ ಕಮಾಂಡ್ ಸೆಂಟರ್ ದೂರುಗಳ ನಿವಾರಣೆ ಹಾಗೂ ಸಮನ್ವಯ ಹೆಚ್ಚಿಸಲು ಸಹಾಯಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ರಮವು ಕರ್ನಾಟಕ ಸೈಬರ್ ಸೆಕ್ಯೂರಿಟಿ ಪಾಲಿಸಿ 2023ರ ಭಾಗವಾಗಿದ್ದು, ಡೇಟಾ ರಕ್ಷಣೆಗೆ, ಆಡಿಟ್‌ಗಳಿಗೆ ಹಾಗೂ ತಾಂತ್ರಿಕ ಬಲವರ್ಧನೆಗೆ ಒತ್ತು ನೀಡುತ್ತದೆ.
ರಾಜ್ಯ ಸರ್ಕಾರದ ಈ ಮಹತ್ವದ ಹೆಜ್ಜೆಯಿಂದ, ಸೈಬರ್ ವಂಚನೆ ನಿಯಂತ್ರಣ ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆಗೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ.