ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ಆಘಾತಕಾರಿ ದರೋಡೆ ನಡೆದಿದೆ. ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿದ ಖತರ್ನಾಕ್ ದಂಪತಿ, ಮಹಿಳೆಯನ್ನು ಕಟ್ಟಿಹಾಕಿ ಮನೆಯಲ್ಲಿದ್ದ 200 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಮಾಹಿತಿಯ ಪ್ರಕಾರ, ದರೋಡೆ ಘಟನೆ ಮಧ್ಯಾಹ್ನ 2.30ರ ಸುಮಾರಿಗೆ ರವಿಕುಮಾರ್ ಮತ್ತು ನಾಗವೇಣಿ ದಂಪತಿ ಮನೆಯಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ರವಿಕುಮಾರ್ ಆ ವೇಳೆ ಕೆಲಸಕ್ಕೆ ತೆರಳಿದ್ದರೆ, ಮನೆಯಲ್ಲಿ ನಾಗವೇಣಿ ಒಬ್ಬರೇ ಇದ್ದರು.
ಆ ಸಮಯದಲ್ಲಿ ಮನೆಗೆ ಬಂದ ಅಪರಿಚಿತ ದಂಪತಿ “ಆಹ್ವಾನ ಪತ್ರಿಕೆ ಕೊಡಬೇಕಿತ್ತು” ಎಂದು ಹೇಳಿ, “ನೀರು ಕೊಡಿ” ಎಂದು ಕೇಳಿದ್ದಾರೆ. ನಾಗವೇಣಿ ಅಡುಗೆಮನೆಗೆ ತೆರಳುತ್ತಿದ್ದಂತೆ, ವ್ಯಕ್ತಿ ಅವರ ಹಿಂದೆ ಮನೆಗೆ ನುಗ್ಗಿ, ಅವರನ್ನು ರೂಮ್ಗೆ ಎಳೆದೊಯ್ದು ಕೈಕಾಲು ಕಟ್ಟಿಹಾಕಿ, ಚಾಕು ತೋರಿಸಿ ಬೆದರಿಸಿ ಚಿನ್ನಾಭರಣದ ಕೀ ಪಡೆದುಕೊಂಡಿದ್ದಾನೆ.


ಅಪರಾಧಿಗಳು ಮನೆಯಲ್ಲಿದ್ದ 200 ಗ್ರಾಂ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ನಂತರ ಪ್ರಜ್ಞೆ ಪಡೆದ ನಾಗವೇಣಿ ತಮ್ಮ ಸ್ನೇಹಿತೆಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪರಿಚಿತ ದಂಪತಿಯ ಶೋಧ ಕಾರ್ಯ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳ ಗುರುತು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.
ಪೊಲೀಸರು ನಾಗರಿಕರಿಗೆ ಎಚ್ಚರಿಕೆ ನೀಡಿದ್ದು — ಅಪರಿಚಿತರನ್ನು, ಆಹ್ವಾನ ಪತ್ರಿಕೆ ಅಥವಾ ಪಾರ್ಸೆಲ್ ನೀಡುವ ನೆಪದಲ್ಲಿ ಮನೆಗೆ ಒಳ ಬಿಡದಂತೆ ಸಲಹೆ ನೀಡಿದ್ದಾರೆ.
