ಹಾವೇರಿ:
ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಮಕ್ಕಳ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 25 ರಷ್ಟೊತ್ತಿಗೆ ಕೋವಿಡ್ ಎರಡನೆಯ ಅಲೆ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ. ಹೀಗಾಗಿ ಜೂನ್ 25ರ ನಂತರ ಮಕ್ಕಳ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಮುಂದಿನ ಮೂರು ತಿಂಗಳುಗಳ ಕಾಲ ನಿರಂತರವಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.
ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಮಕ್ಕಳ ತಜ್ಞರು ಮತ್ತು ಇತರೆ ವೈದ್ಯರು ಆರೋಗ್ಯ ಮಕ್ಕಳ ತಪಾಸಣೆ ಮಾಡಿ ಅವರಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಿದ್ದಾರೆ. ಯಾವ ಮಕ್ಕಳಿಗೆ ಪೌಷ್ಟಿಕತೆಯ ಕೊರತೆ ಇದೆಯೋ ಅವರಿಗೆ ಪೌಷ್ಟಿಕ ಆಹಾರ ನೀಡಲಾಗುವುದು. ಒಟ್ಟಾರೆಯಾಗಿ ಬಡ ಮಕ್ಕಳ ಆರೋಗ್ಯವನ್ನು ಸದೃಢಗೊಳಿಸುವುದು ನಮ್ಮ ಸದುದ್ದೇಶ ಎಂದು ಬಸವರಾಜ್ ಬೊಮ್ಮಾಯಿ ವಿವರಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ 50 ವೆಂಟಿಲೇಟರ್
ಈ ತಿಂಗಳ ಅಂತ್ಯದೊಳಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿನ ವೆಂಟಿಲೇಟರ್ ಗಳ ಸಂಖ್ಯೆಯನ್ನು 50 ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಈಗಾಗಲೇ 32 ವೆಂಟಿಲೇಟರ್ ಗಳು ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಮೂರು ವೆಂಟಿಲೇಟರ್ ಗಳನ್ನು ಜಿಲ್ಲೆಗೆ ಇಂದು ದಾನ ಮಾಡಿದ್ದಾರೆ. 8 ವೆಂಟಿಲೆಟರ್ ಗಳನ್ನು ಸರ್ಕಾರ ಒದಗಿಸಿದೆ. ಬಾಕಿ ಉಳಿದ ವೆಂಟಿಲೇಟರ್ ಗಳನ್ನು ಸರ್ಕಾರದಿಂದ ಹಾಗೂ ದಾನಿಗಳಿಂದ ಪಡೆದು ಜಿಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗುವುದು. ಇದಕ್ಕೆ ಬೇಕಾದ ಸಿಬ್ಬಂದಿ ಮತ್ತು ಅವರಿಗೆ ತರಬೇತಿಯನ್ನು ನೀಡುವ ಕೆಲಸವನ್ನು ಜಿಲ್ಲಾಧಿಕಾರಿಗಳು ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.