ಬೆಂಗಳೂರು:
ಅಮೆರಿಕದ ಹತ್ತಾರು ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿವೆ. ಇವುಗಳಿಗೆ ಸುಗಮ ಅನುಕೂಲ ಕಲ್ಪಿಸಲು ಸೂಕ್ತ ವೇದಿಕೆಯೊಂದನ್ನು ರಚಿಸಲಾಗುವುದು. ಇದರ ಜತೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯ ಮೂಲಕ ಕನಿಷ್ಠಪಕ್ಷ ಶೇಕಡ 75ರಷ್ಟಾದರೂ ಅಭಿವೃದ್ಧಿಪಡಿಸಿದ ಕೈಗಾರಿಕಾ ನಿವೇಶನಗಳನ್ನೇ ಇನ್ನು ಮುಂದೆ ಉದ್ಯಮಗಳಿಗೆ ನೀಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಅಮೆರಿಕನ್ ಚೇಬರ್ ಆಫ್ ಕಾಮರ್ಸ್ ಇನ್ ಇಂಡಿಯಾ ಸಂಘಟನೆಯ ಕರ್ನಾಟಕ ಘಟಕವು ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.
ಉದ್ಯಮಿಯೊಬ್ಬರ ಸಲಹೆಗೆ ಸ್ಪಂದಿಸಿದ ಸಚಿವರು, ಹಣಕಾಸು ಸಲಹಾ ಸಮಿತಿ ರಚಿಸುವ ಇಂಗಿತ ವ್ಯಕ್ತಪಡಿಸಿರು.
ರಾಜ್ಯದಲ್ಲಿ ಇರುವ ಕೈಗಾರಿಕಾ ನೀತಿಗಳು ಉತ್ತೇಜನಕಾರಿಯಾಗಿದ್ದು, ದೇಶದಲ್ಲಿ ಬೇರಾವ ರಾಜ್ಯದಲ್ಲೂ ಇರದಂತಹ ಅನುಕೂಲಗಳನ್ನು ನೀಡುತ್ತಿದೆ. ಬಿಯಾಂಡ್ ಬೆಂಗಳೂರು ಉಪಕ್ರಮದಡಿ, ರಾಜಧಾನಿಯಿಂದ ಆಚೆಗೆ ಹೋಗಿ ಉದ್ದಿಮೆಗಳನ್ನು ಸ್ಥಾಪಿಸುವವರಿಗೆ ರಿಯಾಯಿತಿ ಕೊಡಲಾಗುತ್ತಿದೆ. ಇನ್ನು 15 ದಿನಗಳಲ್ಲಿ ಉದ್ಯಮಿಗಳ ಸಭೆ ಕರೆದು, ಅವರ ಆಲೋಚನೆಗಳಿಗೆ ಕಿವಿಗೊಡುತ್ತೇವೆ ಎಂದು ಅವರು ಭರವಸೆ ನೀಡಿದರು.
Will create a suitable platform to attract investments from American companies.
— M B Patil (@MBPatil) August 18, 2023
At the prestigious gathering hosted by the American Chamber of Commerce in India, Karnataka Chapter, discussions revolved around American companies' interest in venturing into the state's business… pic.twitter.com/qHEyjXzQ3E
ರಾಜ್ಯದ ಎಲ್ಲಾ ಕೈಗಾರಿಕಾ ಪ್ರದೇಶಗಳನ್ನೂ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸರಕಾರವು ತೀರ್ಮಾನಿಸಿದ. ಇದಕ್ಕೆ ಪೂರಕವಾಗಿ ಹೊಸ ಕೈಗಾರಿಕಾ ನೀತಿಯನ್ನೂ ಜಾರಿಗೆ ತರುವ ಕೆಲಸ ನಡೆಯುತ್ತಿದೆ. ಅಗತ್ಯ ಭೂಮಿ, ನೀರು ಮತ್ತು ವಿದ್ಯುತ್ ಸಮೃದ್ಧವಾಗಿರುವ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಉದ್ಯಮಿಗಳು ಹೂಡಿಕೆಗೆ ಮನಸ್ಸು ಮಾಡಬೇಕು. ಅದನ್ನು ನಾವು ಸಂಪೂರ್ಣ ಸ್ವಾಗತಿಸುತ್ತೇವೆ ಎಂದು ಅವರು ಆಹ್ವಾನ ನೀಡಿದರು.
ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಎರಡು ತಿಂಗಳಲ್ಲೇ 40 ಸಾವಿರ ಕೋಟಿ ರೂ. ಬಂಡವಾಳ ರಾಜ್ಯಕ್ಕೆ ಹರಿದು ಬರುವುದು ಖಾತ್ರಿಯಾಗಿದೆ. ಮಿಕ್ಕಂತೆ ಇನ್ನೂ 60 ಸಾವಿರ ಕೋಟಿ ರೂ. ಹೂಡಲು ಅನೇಕ ಕಂಪನಿಗಳು ಮುಂದೆ ಬಂದಿವೆ. ಅಂದರೆ, ಕ್ಷಿಪ್ರ ಕಾಲಾವಧಿಯಲ್ಲಿ 1 ಲಕ್ಷ ಕೋಟಿ ರೂ.ಗಳ ಒಟ್ಟು ಬಂಡವಾಳ ಹರಿದು ಬರಲಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಟಾಟಾ ಸಮೂಹದ ಸಂಸ್ಥೆ ಮುಂದೆ ಬಂದಿದ್ದು, ಮೂರು ಕಡೆಗಳಲ್ಲಿ ಕಾಮನ್ ಫೆಸಿಲಿಟೀಸ್ ಸೆಂಟರ್‍ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ನುಡಿದರು.
ನಮ್ಮಲ್ಲಿ ಐಟಿ ಕ್ಷೇತ್ರ ಚೆನ್ನಾಗಿದೆ. ಇದರ ಜೊತೆಗೆ ಉತ್ಪಾದನಾ ಕ್ಷೇತ್ರವೂ ಅಭಿವೃದ್ಧಿ ಆಗಬೇಕು. ಹೀಗಾಗಿ ಇದಕ್ಕೆ ಪೂರಕವಾದ ನಿಯಮಗಳನ್ನು ರೂಪಿಸಲಾಗುವುದು. ಅಮೆರಿಕದ ಕಂಪನಿಗಳು ಇ-ಮೊಬಿಲಿಟಿ, ಇಎಸ್‌ಡಿಎಂ, ಪರಿಸರಸ್ನೇಹಿ ಇಂಧನ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಹೆಚ್ಚು ಹೂಡಿಕೆ ಮಾಡುವಂತೆ ಮಾತುಕತೆಗೆ ಚಾಲನೆ ನೀಡಲಾಗಿದೆ. ಇವೆಲ್ಲವೂ ಸಾಧ್ಯವಾಗುವಂತೆ ನೋಡಿಕೊಳ್ಳಲು ‘ಇನ್ವೆಸ್ಟ್ ಕರ್ನಾಟಕ ಫೋರಂ’ ಅನ್ನು ಪುನಾರಚಿಸಲಾಗುತ್ತಿದೆ. ಜತೆಗೆ, ಹೂಡಿಕೆ ಆಕರ್ಷಿಸಲು ಸರಕಾರಕ್ಕೆ ಸೂಕ್ತ ಸಲಹೆ ನೀಡಲು ‘ಸ್ಟ್ರಾಟೆಜಿಕ್ ಇನ್ವೆಸ್ಟ್‌ಮೆಂಟ್ಸ್ ಕಮಿಟಿ’ (ಎಸ್‌ಐಸಿ)ಯನ್ನು ಕೂಡ ರಚಿಸಲಾಗುತ್ತಿದೆ ಎಂದು ಪಾಟೀಲ ಹೇಳಿದರು.
ಅಮೆಚಾನ್ ಪ್ರತಿನಿಧಿಗಳಾದ ರಾಜಾನ್ ಖನ್ನಾ, ಸೋಮ್ ಸತ್ಸಂಗಿ, ಅತುಲ್ ಉಜಗರ್ ಮತ್ತಿತರರು ಇದ್ದರು.