Crypto Currency: ಖಾಸಗಿ ಕ್ರಿಪ್ಟೋ ಕರೆನ್ಸಿಗಳು ವ್ಯವಸ್ಥೆಯನ್ನು ಹಾಳುಗೆಡವಲು ಹುಟ್ಟಿದಂತಿವೆ: RBI ಗವರ್ನರ್
October 10, 2023 8:40 AM 1 minute read
ಹೊಸದಿಲ್ಲಿ: ಮುಂದಿನ ಆರ್ಥಿಕ ಬಿಕ್ಕಟ್ಟು ಕೋವಿಡ್‌ನಿಂದ ಅಲ್ಲ, ಖಾಸಗಿ ಕ್ರಿಪ್ಟೋ ಕರೆನ್ಸಿಗಳಿಂದಾಗಿಯೇ ಸಂಭವಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಭವಿಷ್ಯ ನುಡಿದಿದ್ದಾರೆ. ಅಲ್ಲದೇ, ಕ್ರಿಪ್ಟೋ ಕರೆನ್ಸಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಈ ಕ್ರಿಪ್ಟೋ ಕರೆನ್ಸಿಗಳು ಯಾವುದೇ ನಿರ್ದಿಷ್ಟ ಮೌಲ್ಯವನ್ನು ಹೊಂದಿಲ್ಲ. ಅಲ್ಲದೇ, ಆರ್ಥಿಕ ಸ್ಥಿರತೆಗೆ ಅಪಾಯ ಉಂಟು ಮಾಡುತ್ತವೆ,” ಎಂದರು.
ಖಾಸಗಿ ಕ್ರಿಪ್ಟೋ ಕರೆನ್ಸಿಗಳು ವ್ಯವಸ್ಥೆಯನ್ನು ಹಾಳುಗೆಡವಲು ಹುಟ್ಟಿದಂತಿವೆ. ವ್ಯವಸ್ಥೆಯನ್ನು ಹಿಮ್ಮೆಟ್ಟಿಸಲು ಕ್ರಿಪ್ಟೋ ಕರೆನ್ಸಿಗಳು ಬಯಸುತ್ತವೆ,” ಎಂದು ಅಭಿಪ್ರಾಯಪಟ್ಟರು.
ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿಯೇ ಡಿಜಿಟಲ್ ರೂಪಾಯಿಯನ್ನು(ಸಿಬಿಡಿಸಿ) ಆರ್‌ಬಿಐ ಚಲಾವಣೆಗೆ ಬಿಟ್ಟಿದೆ. ಚಾಲ್ತಿಯಲ್ಲಿರುವ ಫೋನ್‌ಪೇ, ಗೂಗಲ್‌ಪೇಯಂಥ ಯುಪಿಐ ಸೇವೆಗೂ, ಸಿಬಿಡಿಸಿಗೂ ವ್ಯತ್ಯಾಸವಿದೆ. ಈ ಬಗ್ಗೆ ವಿವರಿಸಿರುವ ಶಕ್ತಿಕಾಂತ ದಾಸ್, “ಯುಪಿಐ ಅನ್ನುವುದು ಒಂದು ಹಣ ಪಾವತಿಯ ವ್ಯವಸ್ಥೆಯಾಗಿದೆ. ಆದರೆ ಸಿಬಿಡಿಸಿ ಅನ್ನುವುದು ಒಂದು ಕರೆನ್ಸಿ. ಬ್ಯಾಂಕ್‌ಗಳ ಮಧ್ಯಸ್ಥಿಕೆಯನ್ನು ಯುಪಿಐ ಒಳಗೊಂಡಿರುತ್ತದೆ. ಆದರೆ ಸಿಬಿಡಿಸಿ ಅನ್ನುವುದು ಕರೆನ್ಸಿ ನೋಟುಗಳಂತಿದೆ,” ಎಂದು ವಿವರಿಸಿದರು.