ಬೆಂಗಳೂರು:
ರಾಜ್ಯ ಸರ್ಕಾರ 2020-21 ನೇ ವರ್ಷವನ್ನು ಕನ್ನಡ ಕಾಯಕ ವರ್ಷಾಚರಣೆ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
ತಂತ್ರಾಂಶದಲ್ಲಿ ಕನ್ನಡವನ್ನು ಯಶಸ್ವಿಯಾಗಿ ಬಳಸಲು ಕಾರ್ಯಕ್ರಮ ರೂಪಿಸುವುದು. ಇಲಾಖೆಗಳು ರೂಪಿಸುವ ನೀತಿ, ಕರಡು ಪ್ರತಿಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಸಿದ್ದಪಡಿಸಬೇಕು. ಅನುಮೊದಿತ ಅಂತಿಮ ಪ್ರತಿಯನ್ನು ಕನ್ನಡದಲ್ಲಿ ನೀಡಬೇಕು. ತಂತ್ರಾಂಶ ವ್ಯವಸ್ಥೆ ಮೂಲಕ ಅರ್ಜಿದಾರರಿಗೆ ಎಸ್‍ಎಂಎಸ್ ಹಾಗೂ ಇ-ಮೇಲ್‍ಗಳನ್ನು ಕನ್ನಡದಲ್ಲಿ ಕಳುಹಿಸುವುದು ಎಂದು ಸೂಚಿಸಲಾಗಿದೆ.
ಕರ್ನಾಟಕದ ನಗರ ಪಟ್ಟಣಗಳ ಹೆಸರುಗಳನ್ನು ಕನ್ನಡದಲ್ಲಿಯೇ ಬರೆಯುವುದು, ಮೈಲುಗಲ್ಲುಗಳ ಮೇಲೆ ಕನ್ನಡ ಅಂಕಿ ಮತ್ತ ಅಕ್ಷರ ಬಳಕೆ, ಎಲ್ಲ ಇಲಾಖೆಗಳ ಜಾಲತಾಣಗಳ ಪ್ರಧಾನ ಹಾಗೂ ಒಳ ಪುಟಗಳು, ಸಾಮಾಜಿಕ ಜಾಲತಾಣದಲ್ಲೂ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಇಲಾಖೆ ಟಿಪ್ಪಣಿಗಳು, ಸಚಿವ ಸಂಪುಟದ ಟಿಪ್ಪಣಿ, ಕಾಯ್ದೆ ಕಾನೂನು ಆದೇಶಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬಳಕೆ ಮಾಡಬೇಕು. ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಪ್ಯಾಕೇಟ್ ಮೇಲೆ ಕನ್ನಡ ಬಳಕೆ ಮಾಡುವಂತೆ ಪ್ರೇರೇಪಿಸಬೇಕು.
ನಿಗಮ ಮಂಡಳಿಗಳು, ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಸಂಘ ಸಂಸ್ಥೆಗಳು ವಾರ್ಷಿಕ ವರದಿಗಳನ್ನು, ಆಯವ್ಯಯ ದಾಖಲೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಸಲ್ಲಿಸಬೇಕು, ರಾಜ್ಯ ಸರ್ಕಾರ ನೇಮಿಸಿಕೊಳ್ಳುವ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ನೇಮಕಾತಿಯಲ್ಲಿ ಕಡ್ಡಾಯವಾಗಿ ಕನ್ನಡಿಗರನ್ನೇ ಒದಗಿಸುವಂತೆ ಮಾನವ ಸಂಪನ್ಮೂಲ ಸೇವೆ ಒದಗಿಸುವ ಸಂಸ್ಥೆಗಳಿಗೆ ಷರತ್ತು ವಿಧಿಸಬೇಕು. ಜಿಲ್ಲೆಯ ಪ್ರಮುಖ ರಸ್ತೆ, ವೃತ್ತಗಳಿಗೆ ನಾಡಿನ ಪ್ರಮುಖ ಸಾಹಿತಿಗಳ, ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡುವುದು. ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ಹೋಂಗಳು ಸಾರ್ವಜನಿಕ ಮಾಹಿತಿಗಳನ್ನು ಕನ್ನಡದಲ್ಲಿಯೇ ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ಮುಖ್ಯಕಾರ್ಯದರ್ಶಿ ಅವರು ತಿಳಿಸಿದ್ದಾರೆ.