ಬೆಂಗಳೂರು:
ಸಿ.ಎಸ್.ಆರ್ (corporate social responsibility)ನಿಧಿ ಪರಿಕಲ್ಪನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ತಿಳಿಸಿದರು.
ಅವರು ಇಂದು ಬೆಂಗಳೂರು ಸಿಎಸ್ಆರ್ ಲೀಡರ್ ಶಿಪ್ ಸಮ್ಮಿಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡುವುದು ನಮ್ಮ ಸಂಸ್ಕೃತಿ. ಆದರೆ ಎಲ್ಲಿ, ಹೇಗೆ ಹಾಗೂ ಏನನ್ನು ಕೊಡುವುದು ಎನ್ನುವುದು ಮುಖ್ಯವಾಗುತ್ತದೆ. ‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’ ಎನ್ನುವುದು ಸರ್ವಜ್ಞನ ನುಡಿ. ತಾವು ಮಾಡಿದ ಒಳ್ಳೆಯ ಕೆಲಸದಿಂದ ಆಗುವ ಪ್ರಯೋಜನದ ಬಗ್ಗೆ ಯೋಚಿಸಿದಾಗ ಸಂತೋಷವಾಗುವುದಲ್ಲದೆ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದರು.
ದಾನದ ಉದ್ದೇಶ ನಮಗೆ ತಿಳಿದಿರಬೇಕು. ಅದು ನಮ್ಮನ್ನು ನಮ್ಮ ಗುರಿಯತ್ತ ಒಯ್ಯಬೇಕು.ಸಹಾಯ ಪಡೆಯುವವರಿಗಿಂತ ಸಹಾಯ ಮಾಡಿದವರ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದರು.
ಸಿಎಸ್ಆರ್ ಚಟುವಟಿಕೆ ವ್ಯಕ್ತಿತ್ವ ನಿರ್ಮಿಸುತ್ತದೆ
ಸಿಎಸ್ ಆರ್ ಕೇವಲ ಆರ್ಥಿಕ ನೆರವು ಮಾತ್ರವಲ್ಲ ಒಳ್ಳೆಯ ಕೃತ್ಯ ಹಾಗೂ ವ್ಯಕ್ತಿತ್ವವನ್ನೂ ನಿರ್ಮಾಣ ಮಾಡುತ್ತದೆ. ಜನರಲ್ಲಿ ಒಳ್ಳೆಯ ವ್ಯಕ್ತಿತ್ವದ ನಿರ್ಮಾಣದಿಂದ ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ. ಈಗಿನ ಆಧುನಿಕ ಯುಗದಲ್ಲಿ ಹೊಸ ಸವಾಲುಗಳಿಗೆ ಹೊಸ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಹಿರಿಯರಲ್ಲಿದ್ದಂತೆ ನಮ್ಮಲ್ಲಿರುವ ನೀತಿ ಹಾಗೂ ಮೌಲ್ಯಗಳು ಉತ್ತಮವಾದದ್ದಾಗಿದೆ ಎದು ಅಭಿಪ್ರಾಯ ಪಟ್ಟರು.
ವ್ಯಕಿಯೊಬ್ಬ ಮೊದಲು ತನ್ನ ಕುಟುಂಬದವರಿಗೆ ಸಹಾಯ ಮಾಡಬೇಕು. ಆ ನಂತರವೇ ಅವರು ಮತ್ತೊಬ್ಬರಿಗೆ ನೆರವು ನೀಡಲು ಸಾಧ್ಯವಾಗುವುದು. ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಹಿಂತಿರುಗಿಸಬೇಕು. ಹಣವನ್ನೇ ಕೊಡಬೇಕು ಎಂದಿಲ್ಲ. ಮಾನವೀಯ ವರ್ತನೆಯಿಂದ ಮಾನವ ಶಕ್ತಿಯನ್ನು ವೃದ್ಧಿಸಿ ಅಭಿವೃದ್ಧಿಯನ್ನು ಕೈಗೊಳ್ಳಬೇಕು ಎಂದರು.
ಜನಪ್ರಿಯ ಯೋಜನೆಗಳು ಭವಿಷ್ಯಕ್ಕಾಗಿ ಮಾಡುವ ಹೂಡಿಕೆ
ಜನಪ್ರಿಯ ಯೋಜನೆಗಳಾದ ಮಧ್ಯಾಹ್ನದ ಬಿಸಿಯೂಟ, ಪೌಷ್ಟಿಕ ಆಹಾರ, ಸಮವಸ್ತ್ರ, ಸೈಕಲ್ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ‘ವ್ಯರ್ಥ ವೆಚ್ಚ’ ಎಂದು ವ್ಯಾಖ್ಯಾನಿಸಿದ ಆರ್ಥಿಕ ತಜ್ಞರಿದ್ದಾರೆ. ಆದರೆ ಇದು ಹೂಡಿಕೆ ಎಂದು ಭಾವಿಸಿರುವುದಾಗಿ ಮುಖ್ಯ ಮಂತ್ರಿಗಳು ತಿಳಿಸಿದರು.
ಮಕ್ಕಳು ಭವಿಷ್ಯದ ನಾಗರಿಕರು
ಮಕ್ಕಳು ಭವಿಷ್ಯದ ನಾಗರಿಕರು. ಅವರು ಸ್ವಸ್ಥವಾಗಿಲ್ಲದಿದ್ದರೆ ಈ ದೇಶಕ್ಕೆ ಭವಿಷ್ಯವಿಲ್ಲ. ಮಕ್ಕಳು ಬೆಳೆಯಲು ನಾವು ನೆರವಾಗಬೇಕು. ಅನಾರೋಗ್ಯ ಪೀಡಿತ ಮಗು ದೇಶದ ಬೆಳೆವಣಿಗೆಗೆ ವೇಗ ನಿಯಂತ್ರಕವಿದ್ದಂತೆ. ಆರೋಗ್ಯವಂತ ಮಗು ಅಭಿವೃದ್ಧಿಗೆ ಏಣಿ ಇದ್ದಂತೆ ಎಂದು ಅಭಿಪ್ರಾಯ ಪಟ್ಟರು. ಮಾನವ ಅಭಿವೃದ್ಧಿಗೆ ಸಂಬಂಧಪಟ್ಟ ಯೋಜನೆಗಳು ನಾನು ಅಧಿಕಾರದಲ್ಲಿ ಇದಿದ್ದರೂ ಮುಂದುವರೆಯುವುದು ಎಂದರು.
ಮಹಿಳೆಯರಿಗೆ ಆರ್ಥಿಕ ನೆರವು
ಮಹಿಳೆಯರಿಗೆ ಆರ್ಥಿಕ ನೆರವು ನೀಡಿ ಬಡ ಮಹಿಳೆಯರೂ ಸುಸ್ಥಿರ ಜೀವನ ನಡೆಸುವುದಲ್ಲದೆ, ರಾಜ್ಯದ ಜಿ.ಡಿ.ಪಿಗೆ ಕೊಡುಗೆ ನೀಡುವಂತವಾಗಬೇಕು. ಈ ಯೋಜನೆ ರಾಷ್ಟದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವಾಗಲಿದೆ ಎಂದರು.
ಸಿ.ಎಸ್.ಆರ್ ಚಟುವಟಿಕೆಗಳಿಗೆ ಸರ್ಕಾರ ಪ್ರೋತ್ಸಾಹವಿದ್ದು, ಹೆಗಲಿಗೆ ಹೆಗಲು ಕೊಟ್ಟು ಅತ್ಯುತ್ತಮ ವಾತಾವರಣವನ್ನು ಕಲ್ಪಿಸಿ, ಇನ್ನಷ್ಟು ಜನರು ‘ನೀಡುವ’ ಈ ಸತ್ಕಾರ್ಯದಲ್ಲಿ ತೊಡಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನೀತಿ ಆಯೋಗದ ಉಪಾಧ್ಯಕ್ಷ ಡಾ|| ರಾಜೀವ್ ಕುಮಾರ್, ಬಯೋಕಾನ್ ಅಧ್ಯಕ್ಷೆ @kiranshaw, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಯೋಜನಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿ @shalinirajnish ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. (2/2)
— CM of Karnataka (@CMofKarnataka) December 10, 2021
ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜಂದಾರ್ ಷಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.