ಹುಬ್ಬಳ್ಳಿ:
ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದರೆ ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಟೀಲ್, ಈಶ್ವರಪ್ಪ ಹೇಳಿಕೆ ಬಗ್ಗೆ ಮಾಧ್ಯಮಗಳ ಮೂಲಕವೇ ತಿಳಿದು ಬಂದಿದ್ದು, ಈ ಬಗ್ಗೆ ಅವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಅಶಿಸ್ತು ಇಲ್ಲ ಎಂದ ಕಟೀಲ್, ಪಕ್ಷದಲ್ಲಿ ಎಲ್ಲವೂ ಸರಿಯಾಗಿದ್ದು, ಪಕ್ಷದ ನಿರ್ಧಾರಗಳನ್ನು ಯಾರಾದರೂ ವಿರೋಧಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯ ಅಂಗವಾಗಿ ಹುಬ್ಬಳ್ಳಿ-ಧಾರವಾಡದ ಪ್ರವಾಸದಲ್ಲಿ ಇಂದು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ರಾಜಕೀಯದ ಚಿತ್ರಣ, ಬಿಜೆಪಿಯ ಪ್ರಚಾರ ಕಾರ್ಯ ಮುಂತಾದವುಗಳ ಬಗ್ಗೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಲಾಯಿತು. #BJPWinningKarnataka pic.twitter.com/h0WWTwd7Qe
— Nalinkumar Kateel (@nalinkateel) April 26, 2023
ಮುಂಬರುವ ಚುನಾವಣೆಯಲ್ಲಿ ಪಕ್ಷವು ಯೋಜಿತ ಕಾರ್ಯತಂತ್ರದೊಂದಿಗೆ ಹೋರಾಡುತ್ತಿದ್ದು. ಬದಲಾವಣೆ ತರಲು ಯುವ ಮುಖಗಳಿಗೆ ಟಿಕೆಟ್ ನೀಡುವಂತಹ ಕೆಲವು ಪ್ರಯೋಗಗಳನ್ನು ಮಾಡುತ್ತಿದೆ.
ಕಣಕ್ಕಿಳಿದ ಅಭ್ಯರ್ಥಿಗಳು ಹೊಸ ಮತ್ತು ಅನುಭವಿ ಪಕ್ಷದ ಕಾರ್ಯಕರ್ತರು, ವೃತ್ತಿಪರರು ಮತ್ತು ನಿವೃತ್ತ ಅಧಿಕಾರಶಾಹಿಗಳ ಸರಿಯಾದ ಮಿಶ್ರಣ ಎಂದು ಹೇಳಿದ ರಾಜ್ಯ ಬಿಜೆಪಿ ಮುಖ್ಯಸ್ಥರು, ಪಕ್ಷವು ಎಲ್ಲಾ ಸಮುದಾಯಗಳಿಗೆ ಉತ್ತಮ ಪ್ರಾತಿನಿಧ್ಯವನ್ನು ನೀಡಿದೆ ಎಂದು ಹೇಳಿದರು. ಇದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಪಕ್ಷ ತಂದಿರುವ ಬದಲಾವಣೆಗೆ ಮತದಾರರು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು.
ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿರುವ ಕುರಿತು ಮಾತನಾಡಿದ ಕಟೀಲ್, ಪಕ್ಷದ ಸಂಸದೀಯ ಮಂಡಳಿ ಈ ನಿರ್ಧಾರ ಕೈಗೊಂಡಿದೆಯೇ ಹೊರತು ಯಾವುದೇ ವ್ಯಕ್ತಿಯಲ್ಲ. ಬಿಜೆಪಿಯಿಂದ ಹೊರಬಂದ ನಂತರ ಶೆಟ್ಟರ್ ಅವರು ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಆದರೆ ಅದು ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.