ಬೆಂಗಳೂರು: ರಾಜ್ಯದಲ್ಲಿ ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬಿದ್ದಿದ್ದು, ಇದು ಸಂವಿಧಾನಬದ್ಧ ಮೌಲ್ಯಗಳನ್ನು ಕಾಪಾಡುವತ್ತದ ಮಹತ್ವದ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಈ ಸಾಧನೆಯ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ನಗರದಲ್ಲಿ ನಡೆದ ಪೊಲೀಸ್ ಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದರು —
“ರಾಜ್ಯದ ಘನತೆ ಮತ್ತು ಅಭಿವೃದ್ಧಿಗೆ ಕಂಟಕವಾಗಿದ್ದ ಅನೈತಿಕ ಪೊಲೀಸ್ ಗಿರಿ ಇದೀಗ ಕಡಿಮೆಯಾಗಿದೆ. ಇದು ಶ್ಲಾಘನೀಯ ವಿಷಯ. ಅದೇ ರೀತಿಯಾಗಿ ಮಾದಕ ವಸ್ತು ಹಾವಳಿಗೂ ತಡೆಯುಂಟಾಗಿದೆ. ಈ ಹೋರಾಟವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ,” ಎಂದು ಹೇಳಿದರು.
ಪರಿಶಿಷ್ಟ ಜಾತಿ ವರ್ಗದವರ ಮೇಲಿನ ದೌರ್ಜನ್ಯ ತಡೆಗಾಗಿ ರಾಜ್ಯ ಸರ್ಕಾರವು ಡಿಸಿಆರ್ಇ (DCRE) ಪೊಲೀಸ್ ಠಾಣೆಗಳನ್ನು ಕಾರ್ಯೋನ್ಮುಖಗೊಳಿಸಿದೆ ಎಂದು ಸಿಎಂ ಹೇಳಿದರು.
“ಈ ಠಾಣೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಸಂವಿಧಾನಬದ್ಧ ಹಕ್ಕುಗಳು ಮತ್ತು ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಬೇಕು,” ಎಂದು ಅವರು ಹೇಳಿದರು.
ರಾಜ್ಯದಲ್ಲಿನ ಎಂಟು ಮಂದಿ ಸೇರಿದಂತೆ ದೇಶಾದ್ಯಂತ 191 ಮಂದಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಣೆಯ ವೇಳೆ ಹುತಾತ್ಮರಾಗಿದ್ದಾರೆ ಎಂದು ಸಿಎಂ ಸ್ಮರಿಸಿದರು.
“ಇವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ, ಕೋಮು ಶಕ್ತಿಗಳನ್ನು ನಿಗ್ರಹಿಸುವಲ್ಲಿ, ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದು,” ಎಂದು ಅವರು ಹೇಳಿದರು.
ಸಂವಿಧಾನ ನೀಡಿರುವ ಹಕ್ಕುಗಳನ್ನು ಕಾಪಾಡುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಎಂಬ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಎಂದು ಸಿಎಂ ಹೇಳಿದರು.
ವಿಶೇಷ ಕ್ರಮಗಳು:
- 116 ಮಂದಿ ಪೊಲೀಸ್ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿದೆ.
- ನಿವೃತ್ತ ಪೊಲೀಸ್ ಸಿಬ್ಬಂದಿಗೆ ನೀಡುವ ಆರೋಗ್ಯ ಯೋಜನೆಯ ವೈದ್ಯಕೀಯ ಮರುಪಾವತಿ ಮಿತಿಯನ್ನು ರೂ.1 ಲಕ್ಷದಿಂದ ರೂ.1.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
- ಸಕ್ರೀಯ ಪೊಲೀಸ್ ಸಿಬ್ಬಂದಿಯ ವಾರ್ಷಿಕ ಆರೋಗ್ಯ ತಪಾಸಣಾ ವೆಚ್ಚವನ್ನು ರೂ.1,000ರಿಂದ ರೂ.1,500ಕ್ಕೆ ಹೆಚ್ಚಿಸಲಾಗಿದೆ.
